ಮುಂಬಯಿ, ಜು29(Daijiworld News/SS): ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ತತ್ತರವಾಗಿದೆ. ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ಇದರಿಂದ ವಾಹನ ಸವಾರರು ಪರದಾಡುವಂತಿದೆ. ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ ಜನರನ್ನು ಆತಂಕಕ್ಕೆ ನೂಕಿರುವ ವರ್ಷಧಾರೆ ಮುಂದುವರಿದಿದ್ದು, ಸೋಮವಾರವೂ ಮುಂಬೈನ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಬೈನ ಬಹುತೇಕ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಹಾರಾಷ್ಟ್ರಾದ್ಯಂತ ವ್ಯಾಪಕ ಮಳೆ ಸುರಿದಿದ್ದು, ಪ್ರಸಕ್ತ ಮುಂಗಾರಿನಲ್ಲಿ ಮಳೆ ಕೊರತೆ ಎದುರಿಸಿರುವ ಮರಾಠವಾಡ ಮತ್ತು ವಿದರ್ಭಗಳಲ್ಲೂ ವರುಣನ ಅಬ್ಬರ ಮುಂದುವರಿದಿದೆ.
ಇಂದು ಗುಡುಗು ಸಹಿತ ಧಾರಾಕಾರ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಕಾರಣ, ಎಲ್ಲರೂ ಅಲರ್ಟ್ ಆಗಿರುವಂತೆ ಬೃಹನ್ಮುಂಬೈ ಮಹಾನಗರ ಪಾಲಿಕೆ ಸೂಚಿಸಿದೆ. ಭಾರೀ ಮಳೆಯಿಂದ ಮುರ್ಬಾದ್'ನಿಂದ ಕಲ್ಯಾಣ್ಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಯು ಭಾಗಶಃ ಕೊಚ್ಚಿ ಹೋಗಿದೆ. ಉಲ್ಹಾಸ್ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಬದ್ಲಾಪುರ, ತಿತ್ವಾಲಾ ಮತ್ತು ಕಲ್ಯಾಣ್ನಲ್ಲಿ ಪ್ರವಾಹ ಉಂಟಾಗಿದೆ. ಮುರ್ಬಾದ್ನಲ್ಲಿ 370 ಮನೆಗಳು ಜಲಾವೃತವಾಗಿವೆ. ಇಲ್ಲಿ ಸಿಲುಕಿರುವವರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲು ರಕ್ಷಣಾ ಕಾರ್ಯಕರ್ತರು ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿದ್ದಾರೆ.
ರಾಜಸ್ಥಾನ, ಬಿಹಾರ, ಗುಜರಾತ್, ಅಸ್ಸಾಂನಲ್ಲೂ ವರುಣನ ಅಬ್ಬರ ಮುಂದುವರಿದಿದೆ. ರಾಜಸ್ಥಾನದಲ್ಲಿ ಮಳೆ ಸಂಬಂಧಿ ಘಟನೆಗಳಿಗೆ ಮೃತರ ಸಂಖ್ಯೆ 22ಕ್ಕೇರಿದ್ದರೆ, ಅಸ್ಸಾಂನಲ್ಲಿ 82 ಆಗಿದೆ. ಬಿಹಾರದಲ್ಲಿ 7 ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಒಡಿಶಾದಲ್ಲಿ ಮುಂದಿನ ವಾರ ಭಾರೀ ಮಳೆಯಾಗಲಿದೆ ಎಂದು ಮೂಲಗಳು ತಿಳಿಸಿದೆ.