ಬೆಂಗಳೂರು,ಜು 29 (Daijiworld News/RD): ನಾಲ್ಕನೇ ಬಾರಿ ನೂತನ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಬಿ.ಎಸ್ ಯಡಿಯೂರಪ್ಪ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತಗಳಿಸುವ ಮೂಲಕ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಸ್ಪೀಕರ್ 12 ಮಂದಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ್ದು, ಇದರಿಂದ ಬಿಎಸ್ವೈಯ ದಾರಿ ಇನ್ನೂ ಸುಲಭವಾಗಿದೆ.
ಅತೃಪ್ತ ಶಾಸಕರೇ ದೊಡ್ಡ ತಲೆನೋವಾಗಿ ಪರಿಣಮಿಸಿದ ಬಿಎಸ್ವೈ ಗೆ ಏನಾದರೂ ಅಡ್ಡಿ ಆತಂಕಗಳು ಇವರಿಂದ ಎದರಾಗಬಹುದು ಎಂಬ ಚಿಂತೆ ಕಾಡಿತ್ತು, ಈಗಾಗಲೇ ಅತೃಪ್ತರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್, ಇದರಿಂದ ಪರಿಣಮಿಸಿದ ದೊಡ್ಡ ಸಂಕಷ್ಟ ದೂರವಾಗಿದೆ.
ಒಂದು ವೇಳೆ ಅತೃಪ್ತರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸದೆ ಅಥವಾ ಅನರ್ಹಗೊಳಿಸದೆ ಇದ್ದಿದ್ದರೆ ಅವರಲ್ಲಿ ಕೆಲವರು ಸದನಕ್ಕೆ ಬಂದು ಮೈತ್ರಿ ಪಾಳಯದಲ್ಲಿ ಗುರುತಿಸಿಕೊಳ್ಳುವ ಭಯ ಬಿಜೆಪಿ ಸದಸ್ಯರಲ್ಲಿ ಕಾಡಿತ್ತು. ಆದರೆ ಇದೀಗ ಯಾವ ತೊಂದರೆ ಇಲ್ಲದೆ ತಮ್ಮದೇ ಪಕ್ಷದ ಶಾಸಕರ ಮೂಲಕವೇ ಬಿಎಸ್ವೈ ಬಹುಮತ ಸಾಬೀತು ಪಡಿಸಲಿದ್ದಾರೆ. ಇದರಿಂದಾಗಿ ಸಂಪುಟ ರಚನೆಯ ಹಾದಿ ಕೂಡ ಸುಗಮವಾಗಲಿದೆ.
ಇಂದು ಬೆಳಗ್ಗೆ 11 ಗಂಟೆಗೆ ಬಿಎಸ್ವೈ ವಿಶ್ವಾಸಮತಯಾಚಿಸಲಿದ್ದು, ವಿಶ್ವಾಸ ಗೆದ್ದ ಬಳಿಕ ಧನವಿನಿಯೋಗ ಮಸೂದೆಯನ್ನು ಸದನದಲ್ಲಿ ಮಂಡನೆಯಾಗಲಿದೆ. ಮೈತ್ರಿ ಪಕ್ಷಗಳ ತಕರಾರು ಇಲ್ಲದೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ.