ಬೆಂಗಳೂರು, ಜು 29 (Daijiworld News/MSP): ರಾಜ್ಯದ ನೂತನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೋಮವಾರ ವಿಶ್ವಾಸ ಮತಯಾಚನೆ ಮಾಡಲಿರುವ ಹಿನ್ನಲೆಯಲ್ಲಿ ವಿಧಾನಸೌಧದ ಸುತ್ತಾಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಇಂದು ಬೆಳಗ್ಗೆ 11ಕ್ಕೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸಮತದ ಪ್ರಸ್ತಾವ ಮಂಡಿಸಲಿದ್ದಾರೆ. ವಿಧಾಸಸಭೆಯಲ್ಲಿ ಸಂಖ್ಯಾಬಲದ ಕೊರತೆ ಇರುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಮತ ವಿಭಜನೆಗೆ ಆಗ್ರಹಿಸುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ, ಧ್ವನಿಮತದ ಮೂಲಕ ವಿಶ್ವಾಸಮತ ಅಂಗೀಕಾರಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ನಡುವೆ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿ ಸಭಾತ್ಯಾಗ ಮಾಡಲೂಬಹುದು. ವಿಶ್ವಾಸಮತ ಪ್ರಕ್ರಿಯೆ ನಂತರ ಧನ ವಿನಿಯೋಗ ವಿಧೇಯಕ ಮಂಡನೆಯಾಗಲಿದೆ.
ಇನ್ನು ಸೋಮವಾರ ರಾಜಕೀಯ ಶಕ್ತಿಕೇಂದ್ರದಲ್ಲಿ ಮಹತ್ವರ ಬೆಳವಣಿಗೆಗಳು ನಡೆಯುವ ಕಾರಣ ವಿಧಾನಸೌಧ, ವಿಕಾಸಸೌಧ ಹಾಗೂ ರಾಜಭವನದ ಸುತ್ತಾಮುತ್ತಾ ಖಾಕಿ ಸರ್ಪಗಾವಲು ಹಾಕಿದೆ. ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ 7 ವಿಭಾಗದ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್, ಕಾನ್ಸ್ಟೇಬಲ್, ಹೋಂಗಾರ್ಡ್, ಹೊಯ್ಸಳ, ಕೆಎಸ್ಆರ್ಪಿ ಹಾಗೂ ವಾಟರ್ ಜೆಟ್ ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದಾರೆ.