ಉತ್ತರಪ್ರದೇಶ, ಜು 29 (Daijiworld News/MSP): "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗಲು ನಿರಾಕರಿಸಿದ ಹದಿಹರೆಯ ಹುಡುಗನಿಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ, ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ನಾಲ್ವರು, 15 ವರ್ಷದ ಮುಸ್ಲಿಂ ಬಾಲಕನಿಗೆ, ಬೆಂಕಿ ಹಚ್ಚಿದ್ದಾರೆ. ಯುವಕನನ್ನು ಇಲ್ಲಿನ ಕಾಶಿ ಕಬೀರ್ ಚೌರಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಬಾಲಕನನ್ನು ವಾರಣಾಸಿಯ ಕಬೀರ್ ಚೌರಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಾಲಕನ ಶೇ 60ರಷ್ಟು ದೇಹ ಸುಟ್ಟು ಹೋಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. "ಜೈ ಶ್ರೀ ರಾಮ್" ಎಂದು ಹೇಳದ ಕಾರಣಕ್ಕೆ ನನಗೆ ಬೆಂಕಿ ಹಚ್ಚಲಾಗಿದೆ ಎಂದು ಆ ಹದಿಹರೆಯದ ಬಾಲಕ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದು, ಆಸ್ಪತ್ರೆಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದಾಗ್ಯೂ ಆತನ ಹೇಳಿಕೆಗಳು ಒಂದಕ್ಕೊಂದು ವ್ಯತಿರಿಕ್ತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
"ನಾನು ದುಧಾರಿ ಸೇತುವೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದೆ. ಆಗ ನನ್ನನ್ನು ನಾಲ್ವರು ನನ್ನನ್ನು ಅಪಹರಿಸಿದರು. ಇಬ್ಬರು ನನ್ನ ಕೈಗಳನ್ನು ಕಟ್ಟಿ ಹಾಕಿದರು. ಮೂರನೆಯ ವ್ಯಕ್ತಿ ನನ್ನ ಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾದರು" ಎಂದು ತಿಳಿಸಿದ್ದಾನೆ. ಆತನ ವ್ಯತಿರಿಕ್ತ ಹೇಳಿಕೆಯಿಂದ ಇಡೀ ಪ್ರಕರಣವನ್ನು ಪೊಲೀಸರು ಅನುಮಾನಾಸ್ಪದ ಪ್ರಕರಣವಾಗಿ ನೋಡುತ್ತಿದ್ದಾರೆ.