ಬೆಂಗಳೂರು, ಜು29(Daijiworld News/SS): ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ, ಅವರಿಗೆ ಅಧಿಕಾರ ದಾಹ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಸ್ಪೀಕರ್ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದಾರೆ. ಬಿಜೆಪಿ ಸ್ಪೀಕರ್ ಆದೇಶವನ್ನು ಸ್ವಾಗತ ಮಾಡುವ ಬದಲು ಟೀಕೆ ಮಾಡುತ್ತಿದೆ. ಅವರು ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಪೀಕರ್ ಆದೇಶವನ್ನು ಟೀಕೆ ಮಾಡಿದ್ದು ಸರಿಯಲ್ಲ. ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ. ಅವರಿಗೆ ಅಧಿಕಾರ ದಾಹ ಇದೆ. ಅನರ್ಹ ಶಾಸಕರ ಬಗ್ಗೆ ಅವರಿಗೇಕೆ ಇಷ್ಟು ಕಾಳಜಿ ಇದೆ ಎಂದು ಪ್ರಶ್ನಿಸಿದ್ದಾರೆ.
ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್-ಜೆಡಿಎಸ್ನ ಎಲ್ಲ 17 ಶಾಸಕರು ಅನರ್ಹಗೊಳಿಸುವ ಮಹತ್ವದ ತೀರ್ಮಾನವನ್ನು ಸ್ಪೀಕರ್ ರಮೇಶ್ ಕುಮಾರ್ ಪ್ರಕಟಿಸಿದ್ದಾರೆ. ಕಳೆದ ಗುರುವಾರ ಮೂವರನ್ನು ಅನರ್ಹಗೊಳಿಸಿದ್ದ ಅವರು ಭಾನುವಾರ ಉಳಿದ 14 ಮಂದಿಯನ್ನು ಶಾಸಕತ್ವದಿಂದ ಮುಕ್ತಗೊಳಿಸಿದ್ದಾರೆ. ಇದರಿಂದಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವುದು ಸರಾಗವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ತೀರ್ಮಾನದಿಂದ ಬಂಡಾಯಗಾರರ ಭವಿಷ್ಯ ಡೋಲಾಯಮಾನವಾಗಿದ್ದರೂ ಬಿಜೆಪಿಗೆ ಇದು ವರದಾನವಾದಂತಾಗಿದೆ. ವಿಶ್ವಾಸಮತ ಸಾಬೀತಿನಲ್ಲಿ ಹೊಸ ಸರಕಾರ ಯಶಸ್ವಿಯಾದರೆ ಮುಂದಿನ 6 ತಿಂಗಳು ನಿರಾತಂಕವಾಗಲಿದೆ ಎನ್ನಲಾಗಿದೆ.