National
'ಸರಕಾರಿ ಶಾಲೆ ' ಕೊಡುಗೆ - ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ
- Mon, Jul 29 2019 11:00:29 AM
-
ಬೆಂಗಳೂರು, ಜು 29 (Daijiworld News/RD): ಸರಕಾರಿ ಶಾಲೆಗಳು ಎಂದ ಕೂಡಲೇ ಮೂಗು ಮುರಿಯುವ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿನ ಅವ್ಯವಸ್ಥೆಯನ್ನು ಬೊಟ್ಟು ಮಾಡಿ ತೋರಿಸುವ ಜಾಯಾಮಾನ ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿ ಗಮನಿಸಬಹುದು. ಆದರೆ ಇಲ್ಲೊಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಗೊಂಡು ಇತರ ಶಾಲೆಗಳಿಗೆ ಮಾದರಿಯಾಗಿ ನಿಂತಿದೆ. ಸುಸಜ್ಜಿತ ಕೊಠಡಿ, ವಿದ್ಯಾ ದೇಗುಲದ ವಾತಾವರಣವನ್ನು ಸೃಷ್ಠಿಸುವ ಈ ಶಾಲೆ ಬೆಂಗಳೂರು ಉತ್ತರ ತಾಲೂಕಿನ ನವರತ್ನ ಅಗ್ರಹಾರದಲ್ಲಿದೆ. ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇದಾಗಿದ್ದು, ಅನಿವಾಸಿ ಭಾರತೀಯ ಉದ್ಯಮಿಯೊಬ್ಬರ ನೆರವಿನೊಂದಿಗೆ ಈ ಶಾಲೆ ನಡೆಯುತ್ತಿದ್ದು, ಇದೀಗ ಹೊಸ ರೂಪವನ್ನು ಪಡೆದುಕೊಂಡಿದೆ.
ಖಾಸಗಿ ಶಾಲೆಯನ್ನು ಮೀರಿಸುವಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಈ ಶಾಲೆ ಒಳಗೊಂಡಿದ್ದು, ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ ದೇಣಿಗೆಯಿಂದ ಈ ಶಾಲೆಯನ್ನು ನಿರ್ಮಿಸಿದ್ದಾರೆ. ಅವರು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದು, ಶನಿವಾರದಂದು ಲೋಕಾರ್ಪಣೆಗೊಂಡಿತು. ವಿಭಿನ್ನ ರೀತಿಯಲ್ಲಿ ಈ ಶಾಲೆ ನಿರ್ಮಾಣಗೊಂಡಿದ್ದು, ಶಾಲೆಯ ಸುತ್ತ ಮತ್ತಲಿನ ಸೌಂದರ್ಯಕ್ಕೆ, ಪೋಷಕರು ಫಿದಾ ಆಗಿದ್ದರೆ. ಇದರಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಿಸುವ ಮೂಲಕ ಶಾಲೆಯ ಬಗ್ಗೆ ಸಂತಸಗೊಂಡಿದ್ದಾರೆ.
ಶಾಲೆಯ ಹಿಂದಿನ ಸ್ಥಿತಿ:
1992ರಲ್ಲಿ ನವರತ್ನ ಅಗ್ರಹಾರದ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಾಲ್ಕು ಕೊಠಡಿಗಳ ಕಟ್ಟಡವನ್ನು ನಿರ್ಮಿಸಲಾಗಿತ್ತು. ಆದರೆ, ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡು ಪರಿಣಾಮ ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಇದರಿಂದಾಗಿ ಮಳೆ ಬಂದಾಗ ಮಾಳಿಗೆಯು ಸೋರುತ್ತಿತ್ತು. ಹೀಗಾಗಿ ಕಟ್ಟಡವನ್ನು ಸಂಪೂರ್ಣವಾಗಿ ರಿಪೇರಿ ಮಾಡಿಸಿಕೊಡುವಂತೆ ಅಥವಾ ಹೊಸ ಕಟ್ಟಡವನ್ನು ನಿರ್ಮಿಸಿಕೊಂಡುವಂತೆ ಶಾಲಾ ಆಡಳಿತ ಮಂಡಳಿಯು ಶಿಕ್ಷಣ ಇಲಾಖೆ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರು, ಯಾವುದೇ ರೀತಿಯ ಸ್ಪಂದನೆ ಇಲಾಖೆಯಿಂದ ದೊರೆಯಲಿಲ್ಲ. ಬಿರುಕು ಹೆಚ್ಚಾಗಿ ಅಪಾಯಕಾರಿ ಹಂತ ತಲುಪಿದ ಈ ಕಟ್ಟಡದಿಂದಾಗಿ ಶಿಕ್ಷಕರು ತರಗತಿಯ ಕೊಠಡಿಯಿಂದ ಹೊರಗೆ ಬಂದು ಶಾಲೆಯ ಆವರಣದಲ್ಲಿ ಪಾಠ ಪ್ರವಚನ ಮಾಡಲು ಪ್ರಾರಂಭಿಸಿದ್ದರು.
ಎನ್ಆರ್ಐ ಕುಟುಂಬ ನೆರವು:
ಈ ಎಲ್ಲಾ ತೊಂದರೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲಾ ಮುಖ್ಯ ಶಿಕ್ಷಕರು ನವರತ್ನ ಅಗ್ರಹಾರದ ಬಳಿಯೇ ವಾಸ ಮಾಡುತ್ತಿರುವ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ ಅವರ ಕುಟುಂಬದವರನ್ನು ಭೇಟಿ ಮಾಡಿ, ಶಾಲೆಯನ್ನು ರಿಪೇರಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದರು. ಮುಖ್ಯ ಶಿಕ್ಷಕರ ಮನವಿಗೆ ಸ್ಪಂದಿಸಿದ ಅವರು, ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಕಟ್ಟಡದ ದುಃಸ್ಥಿತಿಯನ್ನು ಕಂಡು ಬೇಸರಗೊಂಡು, ಹೊಸ ಕಟ್ಟಡವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.6 ತಿಂಗಳಲ್ಲಿ ಸುಸಜ್ಜಿತ ಕಟ್ಟಡ:
ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯಿತಿಯೊಂದಿಗೆ ಮಾತುಕತೆ ನಡೆಸಿದ ಕೊಲಾಸೊ ಅವರು, ನವೆಂಬರ್ನಲ್ಲಿ ಹಳೇ ಕಟ್ಟಡವನ್ನು ಸಂಪೂರ್ಣ ನೆಲಸಮಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಜನವರಿಯಿಂದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಂಡ ಪರಿಣಾಮ 6 ತಿಂಗಳ ಅಂತರದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.ಮಕ್ಕಳ ದಾಖಲಾತಿ ಏರಿಕೆ:
ಒಂದರಿಂದ 7 ನೇ ತರಗತಿವರೆಗೆ ಶಾಲೆಯಲ್ಲಿ ಬೋಧನೆ ಮಾಡಲಾಗುತ್ತಿದ್ದು, ಕಳೆದ ಬಾರಿ ಒಟ್ಟು 50 ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ, ಈ ವರ್ಷ ಸುಸಜ್ಜಿತ ಶಾಲೆ ನಿರ್ಮಾಣವಾಗಿದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಹೊಸ ಹುಮ್ಮಸ್ಸಲ್ಲಿ ಇದ್ದು, ಹಾಗಾಗಿ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ 65 ಕ್ಕೆ ಏರಿಕೆಯಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಸಹ ಸೂಚನೆ ನೀಡಿದ್ದು, ಮುಂಬರುವ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿದ ಶಾಲೆಯ ಮುಖ್ಯೋಪಾದ್ಯಾಯರಾದ ವಿಜಯಲಕ್ಷ್ಮೀ ರೊನಾಲ್ಡ್ ಕೊಲಾಸೊ ಅವರನ್ನು ಭೇಟಿ ಮಾಡಿ, ಶಾಲೆಯ ಕಟ್ಟಡ ರಿಪೇರಿಗೆ ನೆರವಾಗುವಂತೆ ಮನವಿ ಮಾಡಿದ್ದೆವು. ಅವರ ಈ ನೆರವಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು,” ಎಂದು ಹೇಳಿದರು.ಶಾಲೆಯ ಸೌಲಭ್ಯ
ಇಂಗ್ಲಿಷ್ನ ’ಯು’ ಆಕಾರದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಎರಡು ಅಂತಸ್ತಿನ ಕಟ್ಟಡ 11 ಕೊಠಡಿಗಳನ್ನು ಹೊಂದಿದೆ. ಪ್ರತಿ ತರಗತಿಗೂ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಇದೆ. ಸಭೆ ಹಾಗೂ ಕಾರ್ಯಕ್ರಮಗಳ ಆಯೋಜನೆಗಾಗಿ ಆಡಿಯೊ, ವಿಡಿಯೊ ಪ್ರೊಜೆಕ್ಟರ್, ಸ್ಕ್ರೀನ್ ವ್ಯವಸ್ಥೆ ಇರುವ ಹೈಟೆಕ್ ಸಭಾಂಗಣ ನಿರ್ಮಿಸಲಾಗಿದೆ. ಪ್ರತ್ಯೇಕವಾಗಿ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಕ್ರೀಡಾ ಉಪಕರಣಗಳ ಕೊಠಡಿ, ಕಚೇರಿ ಹಾಗೂ ದಾಖಲೆಗಳ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಎಲ್ಲ ಕೊಠಡಿಗಳಲ್ಲೂ ಕಂಪ್ಯೂಟರ್ ಮತ್ತು ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಕೊಠಡಿ ಮತ್ತು ಶಾಲೆ ಹೊರ ಭಾಗದಲ್ಲಿ ಒಟ್ಟು 29 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಧುನಿಕ ಪೀಠೋಪಕರಣಗಳನ್ನು ಹಾಕಲಾಗಿದೆ. ಊಟಕ್ಕಾಗಿ ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಲಾಗಿದ್ದು, ಟೇಬಲ್ ಮತ್ತು ಕುರ್ಚಿಗಳನ್ನು ಹಾಕಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕವನ್ನು ಸಹ ಅಳವಡಿಕೆ ಮಾಡಿಲಾಗಿದೆ.ಇನ್ನು ಶಾಲೆಯ ಮುಂಭಾಗ ವಿಶಾಲವಾದ ಪ್ರಾಂಗಣವಿದ್ದು, ಬಲ ಬದಿಯಲ್ಲಿ ಚಿಕ್ಕ ಮಕ್ಕಳು ಆಟವಾಡುವ ವ್ಯವಸ್ಥೆ ಹಾಗೂ ಎಡ ಬದಲಿಯಲ್ಲಿ ಕಬಡ್ಡಿ ಹಾಗೂ ಇತರೆ ಆಟಗಳನ್ನು ಆಡಲು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗಿದೆ. ಬಾಲಕರಿಗೆ 11, ಬಾಲಕಿಯರಿಗೆ ೫ ಹಾಗೂ ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಿಸಲಾಗಿದೆ.
ಭದ್ರತೆಗಾಗಿ ಕಾವಲುಗಾರನ ನೇಮಕ
ಮಕ್ಕಳಿರುವ ಕಾರಣ ಶಾಲೆಯಲ್ಲಿ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಸುತ್ತ ದೊಡ್ಡ ಕಾಂಪೌಂಡ್ ನಿರ್ಮಿಸಲಾಗಿದೆ. ಶಾಲೆಗೆ ಓರ್ವ ಕಾವಲುಗಾರನನ್ನು ಸಹ ನೇಮಕ ಮಾಡಿದ್ದು, ಕಾವಲುಗಾರನ ಕುಟುಂಬಕ್ಕೆ ಪ್ರತ್ಯೇಕ ಕೋಣೆಯೊಂದನ್ನು ರೊನಾಲ್ಡ್ ಕೊಲಾಸೊ ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ.