ಬೆಂಗಳೂರು, ಜು 29 (Daijiworld News/MSP): ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಿದ್ದಾರೆ. 105 ಶಾಸಕರು ಬಿಜೆಪಿ ಸರ್ಕಾರದ ಪರವಾಘಿ ಬೆಂಬಲ ವ್ಯಕ್ತಪಡಿಸಿದ ಪರಿಣಾಮ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕೃತವಾಗಿ ಕರ್ನಾಟಕದ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಮುಂದಿನ ಆರು ತಿಂಗಳು ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರ ಸೇಫ್ ಆಗಿದೆ.
ವಿಶ್ವಾಸ ಗೆದ್ದ ಬಳಿಕ ಸದನದಲ್ಲಿ ಮಾತನಾಡಿದ ಸಿಎಂ, ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ. ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದ್ದೇನೆ. ಜನರ ಸೇವೆಗೆ ಪ್ರಾಮುಖ್ಯತೆ ನೀಡುತ್ತೇನೆ. ನಮಗೆ ವಿರೋಧ ಪಕ್ಷಗಳೂ ಕೂಡಾ ಬೆಂಬಲ ನೀಡಬೇಕು ಎಂದು ಕೋರಿದರು.
ಆ ಬಳಿಕ ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ದ್ವೇಷದ ರಾಜಕಾರಣ ಇಲ್ಲ ಎಂಬ ಸಿಎಂ ಮಾತಿಗೆ ನನ್ನ ಸ್ವಾಗತವಿದೆ. ದೀರ್ಘ ಕಾಲ ಚರ್ಚೆ ನಡೆದಿದೆ. ಹೀಗಾಗಿ ಜಾಸ್ತಿ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.