ಬೆಂಗಳೂರು, ಜು29(Daijiworld News/SS): ನೂತನ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ. ಬಿಜೆಪಿಗೆ 106 ಶಾಸಕರ ಬೆಂಬಲವಿದ್ದು, 17 ಶಾಸಕರ ಅನರ್ಹತೆಯ ಬಳಿಕ ಕಾಂಗ್ರೆಸ್-ಜೆಡಿಎಸ್ 99 ಸದಸ್ಯ ಬಲ ಹೊಂದಿವೆ. ಹೀಗಾಗಿ ಬಿಜೆಪಿ ಇಂದಿನ ಅಗ್ನಿಪರೀಕ್ಷೆಯನ್ನು ಸುಲಭವಾಗಿ ಗೆದ್ದುಕೊಂಡಿದೆ. ಆದರೆ ಬಿಜೆಪಿಯ ಈ ನಡೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಬಿಜೆಪಿಯವರು ಕಾಂಗ್ರಸ್ ನಾಯಕರಿಗೆ ಆಮಿಷ ಒಡ್ಡಿ ಕುದುರೆ ವ್ಯಾಪಾರ ನಡೆಸಿದ್ದಾರೆ. ಇದು ಬಿಜೆಪಿ ಗೆಲವು ಅಲ್ಲ. ಕುದುರೆ ವ್ಯಾಪಾರಕ್ಕೆ ಸಿಕ್ಕ ಜಯ. ರೆಸಾರ್ಟ್ ರಾಜಕೀಯದಲ್ಲಿ ಪರಿಣತಿ ಹೊಂದಿರುವ ಯಡಿಯೂರಪ್ಪ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ್ದಾರೆ ಎಂದು ಟೀಕೆ ಮಾಡಿದೆ.
ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಿದ್ದಾರೆ. ಕರ್ನಾಟಕ ವಿಧಾನಸಭೆಯ ಒಟ್ಟು ಸಂಖ್ಯಾಬಲ 224 ಆಗಿದ್ದು 17 ಮಂದಿಯನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. 105 ಶಾಸಕರ ಬೆಂಬಲ ಹೊಂದಿದ್ದರಿಂದ ಬಿಎಸ್ವೈ ಬಹುಮತ ಸಾಬೀತು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಬಹುಮತ ಸಾಬೀತು ಪಡಿಸಲು 105 ಶಾಸಕರ ಬೆಂಬಲ ಬೇಕಿತ್ತು. ಧ್ವನಿಮತದ ಮೂಲಕ ಯಡಿಯೂರಪ್ಪ ಸರ್ಕಾರ ಪಾಸ್ ಆಗಿದ್ದು ಮುಂದಿನ 6 ತಿಂಗಳು ಯಾವುದೇ ಸಮಸ್ಯೆ ಇಲ್ಲದೇ ಅಧಿಕಾರ ನಡೆಸಬಹುದು.