ಬೆಂಗಳೂರು, ಜು29(Daijiworld News/SS): ಸದನದಲ್ಲಿ ವಿಶ್ವಾಸಮತ ಗೆದ್ದು ರಾಜ್ಯದಲ್ಲಿ ಸುಭದ್ರ ಸರಕಾರಕ್ಕೆ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಚಾಲನೆ ನೀಡಿದ್ದಾರೆ. ಮುಂದಿರುವ ಮೂರು ವರ್ಷ ಹತ್ತು ತಿಂಗಳ ಅವಧಿಯಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ ನಾಗಲೋಟ ಪಡೆಯಲಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಯಡಿಯೂರಪ್ಪನವರು ನೇಕಾರರ ನೂರು ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ್ದಾರೆ. ಪ್ರಧಾನಿ ಮೋದಿಜಿಯವರ ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯದಿಂದಲೂ ನಾಲ್ಕು ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಮೊದಲ ದಿನವೇ ರೈತರ, ನೇಕಾರರ ಮೊಗದಲ್ಲಿ ಹರ್ಷದ ವಾತಾವರಣ ಮೂಡಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದ ಜನರನ್ನು ಅಭಿವೃದ್ಧಿಯತ್ತ ಕರೆದುಕೊಂಡು ಹೋಗುವ ಮೂಲಕ ಯಡಿಯೂರಪ್ಪನವರು ಮಾದರಿ ಮೇಲ್ಪಂಕ್ತಿಯನ್ನು ಹಾಕಿಕೊಡಲಿದ್ದಾರೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ. ಬಿಜೆಪಿಗೆ 106 ಶಾಸಕರ ಬೆಂಬಲವಿದ್ದು, 17 ಶಾಸಕರ ಅನರ್ಹತೆಯ ಬಳಿಕ ಕಾಂಗ್ರೆಸ್-ಜೆಡಿಎಸ್ 99 ಸದಸ್ಯ ಬಲ ಹೊಂದಿವೆ. ಹೀಗಾಗಿ ಬಿಜೆಪಿ ಇಂದಿನ ಅಗ್ನಿಪರೀಕ್ಷೆಯನ್ನು ಸುಲಭವಾಗಿ ಗೆದ್ದುಕೊಂಡಿದೆ.