ಬೆಂಗಳೂರು, ಜು29(Daijiworld News/SS): ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಬರಲು 14 ತಿಂಗಳಿಂದಲೂ ಅವಿರತ ಶ್ರಮಿಸಿದ್ದಾರೆ ಎಂದು ಎಚ್ಡಿಕೆ ವ್ಯಂಗ್ಯವಾಡಿದ್ದಾರೆ.
ಮೈತ್ರಿ ಸರ್ಕಾರದಿಂದಾಗಿ ಆಡಳಿತ ಕುಸಿದಿತ್ತು ಎಂಬುದು ಸುಳ್ಳು. ಇದು ಕೇವಲ ಬಾಯಿಚಪಲದ ಮಾತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು. ಈ 14 ತಿಂಗಳಲ್ಲಿ ನಾನು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅದರ ಬಗ್ಗೆ ನನಗೆ ಆತ್ಮತೃಪ್ತಿ ಇದೆ. ಈ ಬಗ್ಗೆ ನಾನು ಯಾರನ್ನೂ ತೃಪ್ತಿಪಡಿಸಬೇಕಿಲ್ಲ ಎಂದು ಹೇಳಿದರು.
ಸಾಲ ಮನ್ನಾಕ್ಕೆ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಮೈತ್ರಿ ಸರ್ಕಾರದ ಆಡಳಿತ ಕುಸಿದಿತ್ತು ಎಂಬುದಕ್ಕೆ ಮುಖ್ಯಮಂತ್ರಿಗಳು ಜನರ ಎದುರು ಮಾಹಿತಿ ಇಡಬೇಕು. ಋಣಮುಕ್ತ ಕಾಯ್ದೆ ಮೂಲಕ ಜನರ ಕಷ್ಟ ಪರಿಹರಿಸಲು ನಮ್ಮ ಸರ್ಕಾರ ಪ್ರಯತ್ನ ಮಾಡಿದೆ. ತೃಪ್ತರು ಮತ್ತು ಅತೃಪ್ತರು ಅದ್ಯಾವಾಗ ಪಿಶಾಚಿಗಳಾಗುವರೋ ಗೊತ್ತಿಲ್ಲ ಎಂದು ಟೀಕಿಸಿದರು.
ಅತೃಪ್ತರನ್ನು ಅನರ್ಹಗೊಳಿಸಿದ ಸ್ಪೀಕರ್ ವಿರುದ್ಧ ಹೇಳಿಕೆ ನೀಡಿದ ಬಿಜೆಪಿ ನಾಯಕರ ನಡೆಗೆ ಮಾಜಿ ಸಿಎಂ ಎಚ್ಡಿಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಬೋಪಯ್ಯ ಅವರನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಂದ ಬಿಜೆಪಿ ನಾಯಕರು, ಇಂದು ರಮೇಶ್ ಕುಮಾರ್ ಅವರ ತೀರ್ಮಾನವನ್ನು ಟೀಕಿಸುವುದು ಸರಿಯಲ್ಲ ಎದು ಹೇಳಿದರು.
ನೂತನ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ. ಬಿಜೆಪಿಗೆ 106 ಶಾಸಕರ ಬೆಂಬಲವಿದ್ದು, 17 ಶಾಸಕರ ಅನರ್ಹತೆಯ ಬಳಿಕ ಕಾಂಗ್ರೆಸ್-ಜೆಡಿಎಸ್ 99 ಸದಸ್ಯ ಬಲ ಹೊಂದಿವೆ. ಹೀಗಾಗಿ ಬಿಜೆಪಿ ಇಂದಿನ ಅಗ್ನಿಪರೀಕ್ಷೆಯನ್ನು ಸುಲಭವಾಗಿ ಗೆದ್ದುಕೊಂಡಿದೆ.