ನವದೆಹಲಿ, ಜು29(Daijiworld News/SS): ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಶಾಪುರ್ ಸೆಕ್ಟರ್ ಸಮೀಪ ಸೋಮವಾರ ಪಾಕಿಸ್ತಾನ ಸೈನಿಕರು ಗುಂಡಿನ ಹಾಗೂ ಮೋರ್ಟಾರ್ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿರುವುದಾಗಿ ವರದಿ ತಿಳಿಸಿದೆ. ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನಾಪಡೆ ಪ್ರತಿದಾಳಿ ನಡೆಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸೇನಾಮೂಲಗಳು ತಿಳಿಸಿವೆ.
ಕಳೆದ ಕೆಲ ದಿನಗಳ ಹಿಂದೆ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಗರಿಕರು ಗಾಯಗೊಂಡಿದ್ದ ಘಟನೆ ನಡೆದಿತ್ತು. ಜುಲೈ 22ರಂದು ರಜೌರಿ ಜಿಲ್ಲೆಯ ಸುಂದರಬನಿ ಸೆಕ್ಟರ್ ಗಡಿಯಲ್ಲಿ ಪಾಕ್ ನಡೆಸಿದ ಗುಂಡಿನ ದಾಳಿಗೆ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದರು ಎಂದು ವರದಿ ತಿಳಿಸಿದೆ.