ಭೋಪಾಲ್, ಫೆ. 12 (DaijiworldNews/TA): ಸುಮಾರು 45 ವರ್ಷಗಳ ಹಿಂದಿನ ಗೋಧಿ ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. 1980ರಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಆರೋಪಿ ಸಲೀಂ (59) ಅವರನ್ನು ಧಾರ್ ಜಿಲ್ಲೆಯ ಬಾಗ್ ಪಟ್ಟಣದಲ್ಲಿ ಬಂಧಿಸಲಾಗಿದೆ.

ಖಾರ್ಗೋನ್ ಜಿಲ್ಲೆಯ ಬಾಲ್ಸಮುದ್ ಪ್ರದೇಶದ ಸಮೀಪದ ಹೊಲದಿಂದ 90 ಕೆಜಿ ಗೋಧಿ ಕಳ್ಳತನವಾದ ಪ್ರಕರಣದಲ್ಲಿ ಒಟ್ಟು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಳ್ಳತನ ನಡೆದ ಸಮಯದಲ್ಲಿ ಗೋಧಿಯ ಒಟ್ಟು ಮೌಲ್ಯ 184 ರೂ. ಆಗಿದ್ದು, ಪ್ರತಿ ಕೆಜಿಗೆ 2.05 ರೂ. ದರ ಇತ್ತು. ಪ್ರಕರಣದ ಬಳಿಕ ಆರೋಪಿಗಳ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು. ಆದರೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದರು.
ವರ್ಷಗಳ ಅವಧಿಯಲ್ಲಿ ಏಳು ಆರೋಪಿಗಳಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಜಾಮೀನು ಪಡೆದುಕೊಂಡಿದ್ದಾರೆ. ಆದರೆ ಸಲೀಂ ಮಾತ್ರ ಪತ್ತೆಯಾಗಿರಲಿಲ್ಲ. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಶಾಶ್ವತವಾಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ 1980ರ ಹಳೆಯ ಪ್ರಕರಣವನ್ನು ಮರುಪರಿಶೀಲಿಸಿದಾಗ ಒಬ್ಬ ಆರೋಪಿ ಇನ್ನೂ ಕಾಣೆಯಾಗಿರುವುದು ತಿಳಿದುಬಂದಿದೆ.
ಎಸ್ಡಿಒಪಿ ಶ್ವೇತಾ ಶುಕ್ಲಾ ಮಾಹಿತಿ ನೀಡುವಂತೆ, “ಆರೋಪಿಯನ್ನು ಧಾರ್ ಜಿಲ್ಲೆಯ ಬಾಗ್ ಪಟ್ಟಣದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ. ಆತ ತನ್ನ ಗುರುತನ್ನು ಬದಲಾಯಿಸಿಕೊಂಡು ಅಪರಾಧ ಸ್ಥಳದಿಂದ ಸುಮಾರು 90 ಕಿ.ಮೀ ದೂರದಲ್ಲಿ ರಹಸ್ಯವಾಗಿ ವಾಸವಿದ್ದು, ತನ್ನ ಮಗನೊಂದಿಗೆ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದ” ಎಂದು ತಿಳಿಸಿದ್ದಾರೆ.
ಬಂಧನದ ನಂತರ ಸಲೀಂ ಅವರನ್ನು ಕಾಸ್ರಾವಾಡ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇಷ್ಟು ವರ್ಷಗಳ ಬಳಿಕ ಪೊಲೀಸರು ಪ್ರಕರಣವನ್ನು ಮುಂದುವರಿಸುವುದಿಲ್ಲ ಎಂಬ ಭಾವನೆಯಲ್ಲಿದ್ದ ಆತ ಸಾಮಾನ್ಯ ಜೀವನ ನಡೆಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಕುಟುಂಬದಲ್ಲಿ ಆಘಾತ ಮತ್ತು ಪ್ರಶ್ನೆಗಳು ಉದ್ಭವವಾಗಿವೆ. ಸಲೀಂ ಅವರ ಪತ್ನಿ ತಸ್ಲೀಂ ಅವರು, ಕಳ್ಳತನ ನಡೆದ ಸಮಯದಲ್ಲಿ ಸಲೀಂ ಅಪ್ರಾಪ್ತ ವಯಸ್ಸಿನವರಾಗಿದ್ದು, ಅವರಿಗೆ 13ರಿಂದ 15 ವರ್ಷ ವಯಸ್ಸು ಮಾತ್ರ ಇತ್ತು ಎಂದು ಹೇಳಿದ್ದಾರೆ. ಅಪ್ರಾಪ್ತ ವಯಸ್ಸಿನಲ್ಲಿ ನಡೆದ ಪ್ರಕರಣವನ್ನು ಇಷ್ಟು ವರ್ಷಗಳ ಬಳಿಕ ಹೇಗೆ ಮುಂದುವರಿಸಲಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಜೊತೆಗೆ, ಜಾಮೀನಿಗೆ 15 ಸಾವಿರ ರೂ. ಹಾಗೂ ದೂರುದಾರರಿಗೆ 6 ಸಾವಿರ ರೂ. ಪಾವತಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಹಳೆಯ ಪ್ರಕರಣದ ಈ ಬಂಧನ ಮಧ್ಯಪ್ರದೇಶದಲ್ಲಿ ಚರ್ಚೆಗೆ ಕಾರಣವಾಗಿದೆ.