ನವದೆಹಲಿ, ಫೆ. 12 (DaijiworldNews/AA): ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ ಸಂಬಂಧವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಬೇಕೆಂದು ಬಿಜೆಪಿ ಪ್ರಸ್ತಾಪ ಸಲ್ಲಿಸಿದೆ.

ಸಂಸದ ನಿಶಿಕಾಂತ್ ದುಬೆ ಅವರು ಮಾತನಾಡಿ, "ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ನಾನು ಪ್ರಸ್ತಾವನೆ ಸಲ್ಲಿಸಿದ್ದೇನೆ. ಆಜೀವ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು. ಜೊತೆಗೆ ರಾಹುಲ್ ಗಾಂಧಿ ವಿರುದ್ಧ ಮಹತ್ವದ ನಿರ್ಣಯ ಮಂಡಿಸಿದ್ದೇನೆ. ಇದು ವಿಶೇಷ ಹಕ್ಕುಚ್ಯುತಿ ನೋಟಿಸ್ ಅಲ್ಲ. ನಾನು ಒಂದು ಪ್ರಮುಖ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ" ಎಂದು ತಿಳಿಸಿದರು.
"ಯಾವುದೇ ದಾಖಲೆ ಇಲ್ಲದೇ ಮಾತನಾಡುತ್ತಿರುವ ರಾಹುಲ್ ಗಾಂಧಿ ದೇಶದ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಸೊರೊಸ್ ಫೌಂಡೇಶನ್, ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಮತ್ತು ಫೋರ್ಡ್ ಫೌಂಡೇಶನ್ನೊಂದಿಗೆ ಕೈಜೋಡಿಸಿ ವಿದೇಶಗಳಲ್ಲಿ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರತಿಕ್ರಿಯಿಸಿ, "ಆಧಾರ ರಹಿತ ಹೇಳಿಕೆಗಳನ್ನು ನೀಡಿ ಸದನದ ದಾರಿ ತಪ್ಪಿಸಿದ್ದಕ್ಕೆ ನಿಲುವಳಿ ಸೂಚನೆ ಸಲ್ಲಿಸಲಾಗುತ್ತದೆ. ಉಭಯ ಸದನಗಳಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ಸ್ಪಷ್ಟ ನಿಯಮಗಳು ಇವೆ. ಒಬ್ಬ ಸದಸ್ಯರು ಇನ್ನೊಬ್ಬ ಸದಸ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲು ಉದ್ದೇಶಿಸಿದಾಗ ನೀವು ನೋಟಿಸ್ ನೀಡಬೇಕು ಮತ್ತು ಆರೋಪವನ್ನು ಸಾಬೀತುಪಡಿಸಬೇಕು" ಎಂದು ಹೇಳಿದರು.