ಮುಂಬೈ, ಫೆ. 12 (DaijiworldNews/AA): ಭಾರತಕ್ಕೆ ಆಗಮಿಸಿದರೆ ಮಾತ್ರ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಉದ್ಯಮಿ ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಆರ್ಥಿಕ ಅಪರಾಧಿಗಳ ಕಾಯ್ದೆ ಸಾಂವಿಧಾನಿಕ ಸಿಂಧುತ್ವ ಮತ್ತು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರ ಪೀಠವು ನಡೆಸಿತು.
ವಿಚಾರಣೆ ವೇಳೆ ಮಲ್ಯ ಅವರು ಭಾರತಕ್ಕೆ ಮರಳಲು ಉದ್ದೇಶಿಸಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಲು ಒಂದು ಕೊನೆಯ ಅವಕಾಶ ನೀಡಿದೆ. ಭಾರತಕ್ಕೆ ಮರಳದೇ ಇದ್ದರೆ ಅವರ ಅರ್ಜಿಯನ್ನು ಆಲಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.
ಮಲ್ಯ ಹಿಂತಿರುಗಲೇಬೇಕು. ಹಿಂತಿರುಗಲು ಸಾಧ್ಯವಾಗದಿದ್ದರೆ ನಾವು ಈ ಅರ್ಜಿಯನ್ನು ಕೇಳಲು ಸಾಧ್ಯವಿಲ್ಲ. ಮಲ್ಯ ನ್ಯಾಯಾಲಯದ ಪ್ರಕ್ರಿಯೆಯನ್ನು ತಪ್ಪಿಸುತ್ತಿದ್ದಾರೆ.ಇದರಿಂದ ವಿಚಾರಣೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ನೀವು ಸಲ್ಲಿಸಿದ್ದ ಅರ್ಜಿಯನ್ನು ನಾವು ವಜಾಗೊಳಿಸುತ್ತಿಲ್ಲ. ನಾವು ನಿಮಗೆ ಮತ್ತೊಂದು ಅವಕಾಶವನ್ನು ನೀಡುತ್ತಿದ್ದೇವೆ ಎಂದು ಹೇಳಿದೆ.
ಜಾರಿ ನಿರ್ದೇಶನಾಲಯ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಲ್ಯ ಬ್ಯಾಂಕುಗಳ ಹಕ್ಕುಗಳನ್ನು ಪ್ರಶ್ನಿಸಿ ಅಫಿಡವಿಟ್ ಸಲ್ಲಿಸಿದ್ದಾರೆ ಮತ್ತು ಈ ವಿಷಯವನ್ನು ವಸೂಲಾತಿ ಪ್ರಕ್ರಿಯೆಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾದ ಮಂಡಿಸಿದ್ದಾರೆ.