ಚೆನ್ನೈ, ಫೆ. 13 (DaijiworldNews/AA): ತಮಿಳುನಾಡು ಚುನಾವಣೆಗೆ ಮೊದಲೇ ಕಲೈಗ್ನಾರ್ ಮಗಲಿರ್ ಉರಿಮೈ ತೊಗೈ ಯೋಜನೆಯಡಿ ಮಹಿಳೆಯರ ಖಾತೆಗೆ ಡಿಎಂಕೆ ಸರ್ಕಾರ 5 ಸಾವಿರ ರೂ. ಹಣವನ್ನು ಜಮೆ ಮಾಡಿದೆ.

ಈ ಯೋಜನೆಯಡಿ 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 5 ಸಾವಿರ ರೂ. ಜಮೆಯಾಗಿದೆ. ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಹಣದ ಜೊತೆ ಬೇಸಿಗೆ ಸಮಯದಲ್ಲಿ ನೆರವಾಗಲು 2 ಸಾವಿರ ರೂ. ಹಣವನ್ನು ಜಮೆ ಮಾಡಲಾಗಿದೆ.
ವಿಧಾನಸಭಾ ಚುನಾವಣೆ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ದ್ರಾವಿಡ 2.0 ಸರ್ಕಾರದ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ ತಿಂಗಳ ಮೊತ್ತವನ್ನು 2 ಸಾವಿರ ರೂ.ಗೆ ಏರಿಸಲಾಗುವುದು ಎಂದು ತಮಿಳುನಾಡಿನ ಸಿಎಂ ಸ್ಟಾಲಿನ್ ತಿಳಿಸಿದ್ದಾರೆ.
ಕಲೈಗ್ನರ್ ಮಗಲಿರ್ ಉರಿಮೈ ತೊಗೈ ಯೋಜನೆಯನ್ನು ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭಿಸಲಾಗಿತ್ತು. ಆರಂಭದಲ್ಲಿ 1.13 ಕೋಟಿ ಮಹಿಳೆಯರ ಖಾತೆಗೆ 1 ಸಾವಿರ ರೂ. ಜಮೆ ಮಾಡಲಾಗಿತ್ತು. ಇದೀಗ ರಾಜ್ಯಾದ್ಯಂತ 1.31 ಕೋಟಿ ಮಹಿಳೆಯರಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.