ಬೆಂಗಳೂರು, ಜು30(Daijiworld News/SS): ವಾಣಿಜ್ಯ ಹಾಗೂ ಪ್ರಾದೇಶಿಕ ಬ್ಯಾಂಕುಗಳಿಂದ ಮೀನುಗಾರರು ಪಡೆದಿರುವ ಸಾಲವನ್ನು ನೂತನ ಸಚಿವ ಸಂಪುಟ ಸಭೆಯಲ್ಲಿ ಮನ್ನಾ ಮಾಡಲಾಗಿದೆ ಎಂದು ಮೀನುಗಾರಿಕೆ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2017-18 ಮತ್ತು 2018-19 ನೇ ಸಾಲಿನಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಒಟ್ಟು 23 ಸಾವಿರದ 507 ಮೀನುಗಾರರ 60 ಕೋಟಿ 584 ಲಕ್ಷ ರೂಪಾಯಿ ಸಾಲ ವಸೂಲಾತಿ ಬಾಕಿ ಇದೆ. ಸಂಪುಟ ಸಭೆಯಲ್ಲಿ ಸರ್ಕಾರ ಸಾಲ ಮನ್ನಾ ಮಾಡಿರುವುದರಿಂದ ಸುಮಾರು 23 ಸಾವಿರದ 507 ಮೀನುಗಾರರು ಆರ್ಥಿಕ ಸಂಕಷ್ಟದಿಂದ ಹೊರ ಬಂದು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಂತಾಗಿದೆ.
ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ ಒಟ್ಟು 60 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದ್ದು, ಸುಮಾರು 23,507 ಮೀನುಗಾರರು ಸಾಲಮನ್ನಾ ಪ್ರಯೋಜನ ಪಡೆಯಲಿದ್ದಾರೆ. 2017-18, 2018-19 ನೇ ಸಾಲಿನ ಅಂದರೆ ಎರಡು ವರ್ಷಗಳ ಹಿಂದಿನಿಂದ ಈ ವರೆಗೆ ಮಾಡಿದ 50 ಸಾವಿರ ರೂ.ಗಳ ವರಿಗಿನ ಸಾಲ ಮನ್ನಾ ಆಗಲಿದ್ದು, ಈ ಮೂಲಕ ಮೀನುಗಾರರಿಗೆ ಸಿಎಂ ಗಿಫ್ಟ್ ನೀಡಿದ್ದಾರೆ.
ಮೀನುಗಾರರು ಹಾಗೂ ವಿಶೇಷವಾಗಿ ಮಹಿಳಾ ಮೀನುಗಾರರು, ಮೀನು ಮಾರಾಟ ಪರಿಕರಗಳ ಖರೀದಿ, ಮೀನಿನ ವ್ಯಾಪಾರಕ್ಕಾಗಿ ಬಂಡವಾಳ, ಮೀನಿನ ಸಂರಕ್ಷಣೆ ಹಾಗೂ ಮೀನಿನ ಸಾಗಾಣಿಕೆ ಇತರೆ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಶೇ, 2 ರಷ್ಟು ಬಡ್ಡಿದರದಲ್ಲಿ ವಾಣಿಜ್ಯ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ ಸಾಲ ಪಡೆಯುವ ಯೋಜನೆಯನ್ನು ಮೀನುಗಾರಿಕೆ ಇಲಾಖೆ ಅನುಷ್ಠಾನಗೊಳಿಸುತ್ತಿದೆ.
ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು, ನೇಕಾರರು, ಮೀನುಗಾರರ ಸಂಕಷ್ಟವನ್ನು ಪರಿಹರಿಸಲು ವಿಶೇಷ ಗಮನ ಹರಿಸುತ್ತೇನೆ. ಈ ಸಂಬಂಧ ಕ್ಯಾಬಿನೆಟ್ ಸಭೆಯಲ್ಲಿ ಎರಡು ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಪ್ರಧಾನ ಮಂತ್ರಿ ಸಮ್ಮಾನ್ ಯೋಜನೆಗೆ ಈಗಾಗಲೇ ಆಯ್ಕೆ ಮಾಡಲಾದ ರೈತರಿಗೆ ರಾಜ್ಯ ಸರ್ಕಾರದಿಂದಲೂ 4 ಸಾವಿರ ರೂ.ವನ್ನು ಎರಡು ಕಂತುಗಳಲ್ಲಿ ನೀಡಲು ನಿರ್ಧರಿಸಿದ್ದೇವೆ. ನೇಕಾರರ 100 ಕೋಟಿ ರೂ. ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ಯಡಿಯೂರಪ್ಪ ಘೋಷಣೆ ಮಾಡಿದ್ದರು.