ಹುಬ್ಬಳ್ಳಿ, ಫೆ. 16 (DaijiworldNews/AA): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು 3ನೇ ಬಾರಿಗೆ ಧಾರವಾಡ ಹೈಕೋರ್ಟ್ ಪೀಠ ತಿರಸ್ಕರಿಸಿ ಇಂದು ಆದೇಶ ಹೊರಡಿಸಿದೆ.

2024 ಏಪ್ರಿಲ್ 18ರಂದು ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆಯಾಗಿತ್ತು. ನೇಹಾ ಸಹಪಾಠಿ ಫಯಾಜ್ ಮಾರಕಾಸ್ತ್ರಗಳಿಂದ ಆಕೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ಘಟನೆ ಬಳಿಕ ಹುಬ್ಬಳ್ಳಿ ವಿದ್ಯಾನಗರ ಠಾಣೆ ಪೊಲೀಸರು ಆರೋಪಿ ಫಯಾಜ್ನನ್ನು ಬಂಧಿಸಿದ್ದರು.
ಇನ್ನು ಕಳೆದ ಆಗಸ್ಟ್ನಲ್ಲಿ ಹುಬ್ಬಳ್ಳಿಯ ಒಂದನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಆರೋಪಿ ಫಯಾಜ್ ಜಾಮೀನು ಅರ್ಜಿ ಸಲ್ಲಿಸಿದ್ದ. ಆದರೆ ನ್ಯಾಯಾಲಯ ಆತನ ಜಾಮೀನು ಅರ್ಜಿ ತಿರಸ್ಕರಿಸಿತ್ತು. ನಂತರ ಹೈಕೋರ್ಟ್ ಮೆಟ್ಟಿಲೇರಿದ್ದ ಆತನಿಗೆ ಅಲ್ಲಿಯೂ ಆತನ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು.