ನವದೆಹಲಿ, ಫೆ. 16 (DaijiworldNews/TA): ನಾಲ್ಕನೇ ಆವೃತ್ತಿಯ ಎಐ ಇಂಪ್ಯಾಟ್ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇಂದಿನಿಂದ ಫೆಬ್ರುವರಿ 20ರವರೆಗೆ ಐದು ದಿನಗಳ ಕಾಲ ಭಾರತ್ ಮಂಟಪಂನಲ್ಲಿ ಈ ಮಹತ್ವದ ಶೃಂಗಸಭೆಯ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ‘ಜನತೆ, ಭೂಮಿ ಮತ್ತು ಪ್ರಗತಿ’ ಎಂಬ ಥೀಮ್ನಡಿ ನಡೆಯುತ್ತಿರುವ ಈ ಸಮಾವೇಶವು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತದ ಜಾಗತಿಕ ಪಾತ್ರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ.

ಹಿಂದಿನ ಮೂರು ಎಐ ಇಂಪ್ಯಾಕ್ಟ್ ಸಮಿಟ್ಗಳು ಬ್ರಿಟನ್, ಕೊರಿಯಾ ಮತ್ತು ಫ್ರಾನ್ಸ್ ದೇಶಗಳಲ್ಲಿ ನಡೆದಿದ್ದವು. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಮಟ್ಟದ ಜಾಗತಿಕ ಎಐ ಸಮಾವೇಶ ಆಯೋಜನೆಯಾಗಿರುವುದು ವಿಶೇಷತೆ. ಸಮಾವೇಶದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ಒಳಗೊಳ್ಳುವಿಕೆ, ನಂಬಿಕೆ, ಪುಟಿದೇಳುವಿಕೆ, ವಿಜ್ಞಾನ, ಸಂಪನ್ಮೂಲಗಳ ಸದ್ಬಳಕೆ ಹಾಗೂ ಸಾಮಾಜಿಕ ಒಳಿತು ಸೇರಿದಂತೆ ಏಳು ಪ್ರಮುಖ ಅಂಶಗಳ ಮೇಲೆ ಚರ್ಚೆಗಳು ನಡೆಯಲಿವೆ. ಈ ಅಂಶಗಳ ಆಧಾರದ ಮೇಲೆ ಜಾಗತಿಕ ಸಹಭಾಗಿತ್ವಗಳನ್ನು ಬಲಪಡಿಸುವುದಕ್ಕೆ ವಿಶೇಷ ಒತ್ತು ನೀಡಲಾಗಿದೆ.
ಐದು ದಿನಗಳ ಕಾಲ ನಡೆಯುವ ಈ ಶೃಂಗಸಭೆಯಲ್ಲಿ ಪ್ರತಿದಿನ ವಿಭಿನ್ನ ಕಾರ್ಯಕ್ರಮಗಳು ಇರಲಿವೆ. ಎಐ ಕ್ಷೇತ್ರದಲ್ಲಿ ನಡೆದಿರುವ ನೂತನ ಆವಿಷ್ಕಾರಗಳ ಪ್ರದರ್ಶನ, ತಂತ್ರಜ್ಞಾನ ಸಂವಾದಗಳು, ನೀತಿ ರೂಪಣೆ ಕುರಿತ ಚರ್ಚೆಗಳು ಹಾಗೂ ಸ್ಟಾರ್ಟಪ್ಗಳ ಪ್ರಸ್ತುತಿಗಳು ಗಮನ ಸೆಳೆಯಲಿವೆ. 300ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ.
ಜಾಗತಿಕ ಮಟ್ಟದ ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳಾದ ಓಪನ್ ಎಐ, ಗೂಗಲ್, ಎನ್ವಿಡಿಯಾ, ಮೈಕ್ರೋಸಾಫ್ಟ್, ರಿಲಾಯನ್ಸ್, ಆಂಥ್ರೋಪಿಕ್ ಸೇರಿದಂತೆ ಅನೇಕ ಪ್ರಮುಖ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿರುವುದು ಸಮಾವೇಶದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ವಿವಿಧ ದೇಶಗಳ ಪ್ರಧಾನಿ, ಅಧ್ಯಕ್ಷರು, ಸಚಿವರು ಮತ್ತು ಉನ್ನತ ಮಟ್ಟದ ಅಧಿಕಾರಿಗಳೂ ಭಾಗವಹಿಸುತ್ತಿದ್ದಾರೆ.
ಈ ಶೃಂಗಸಭೆಯ ಮೂಲಕ ಜಾಗತಿಕ ಟೆಕ್ ದಿಗ್ಗಜ ಸಂಸ್ಥೆಗಳು ಭಾರತದಲ್ಲಿ ಎಐ ಅಭಿವೃದ್ಧಿಗೆ ಬಂಡವಾಳ ಹೂಡಿಕೆ ಮಾಡುವ ಸಾಧ್ಯತೆ ಇದೆ. ಭಾರತದ ಎಐ ಯೋಜನೆಗಳು ಹಾಗೂ ಸ್ಟಾರ್ಟಪ್ಗಳು ವಿಶ್ವದ ಗಮನ ಸೆಳೆಯಬಹುದು. ತಂತ್ರಜ್ಞಾನವನ್ನು ಜನಕಲ್ಯಾಣ ಮತ್ತು ಪರಿಸರ ಸಂರಕ್ಷಣೆಯೊಂದಿಗೆ ಸಂಯೋಜಿಸುವ ದಿಸೆಯಲ್ಲಿ ಭಾರತ ಕೈಗೊಂಡಿರುವ ಪ್ರಯತ್ನಗಳಿಗೆ ಈ ಸಮಾವೇಶ ವೇದಿಕೆಯಾಗಲಿದೆ.