ಬೆಂಗಳೂರು, ಜು30(Daijiworld News/SS): ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅಳಿಯ ವಿ.ಜಿ ಸಿದ್ದಾರ್ಥ್ ಸೋಮವಾರ ರಾತ್ರಿಯಿಂದ ದಿಢೀರ್ ನಾಪತ್ತೆಯಾಗಿದ್ದು ಕುಟುಂಬಸ್ಥರಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಎಸ್ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದಾರೆ.
ಮುಖ್ಯಮಂತ್ರಿಗಳು ಭೇಟಿ ನೀಡಿ ಕೃಷ್ಣ ಹಾಗೂ ಅವರ ಕುಟುಂಬಸ್ಥರಿಗೆ ಸಮಾಧಾನ ಮಾಡಿದ್ದಾರೆ. ಆತಂಕಕ್ಕೊಳಗಾಗಬೇಡಿ, ಸಿದ್ಧಾರ್ಥ್ ಅವರು ಸುರಕ್ಷಿತವಾಗಿ ವಾಪಸ್ ಬರುತ್ತಾರೆ ಎಂಬುದಾಗಿ ಹೇಳುತ್ತಾ ಬಿಎಸ್ವೈ ಅವರು ಕೃಷ್ಣ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ನಿನ್ನೆ ರಾತ್ರಿಯಿಂದಲೇ ಅನೇಕ ಗಣ್ಯರು ಎಸ್ ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.
ಸೋಮವಾರ ಸಂಜೆ ಬೆಂಗಳೂರಿನಿಂದ ಇನೋವಾ ಕಾರಿನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ರಾತ್ರಿ 7.30ರ ವೇಳೆ ಕಾರಿನಲ್ಲಿ ಚಾಲಕನ ಜತೆ ಉಳ್ಳಾಲದತ್ತ ತೆರಳಿ ಕಾರನ್ನು ಒಂದು ಸೇತುವೆಯ ಬದಿ ನಿಲ್ಲಿಸಲು ಹೇಳಿ, ಏಕಾಂಗಿಯಾಗಿ ಸೇತುವೆಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಆ ಬಳಿಕ ಚಾಲಕ ಸುಮಾರು ಎರಡು ಗಂಟೆ ಕಾದರೂ ಸಿದ್ಧಾರ್ಥ ಬರಲಿಲ್ಲ. ಇದಕ್ಕೆ ಆತಂಕಿತರಾದ ಚಾಲಕ ಪೊಲೀಸ್ ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದಾರೆ. ಸಿದ್ಧಾರ್ಥ ಅವರು ಸೇತುವೆಯ ಮಧ್ಯಭಾಗದಿಂದ ನದಿಗೆ ಹಾರಿರಬಹುದೆಂದು ಶಂಕೆ ಹಿನ್ನೆಲೆಯಲ್ಲಿ ದೇಹಕ್ಕಾಗಿ ಬೋಟ್'ಗಳಲ್ಲಿ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ.