ಬೆಂಗಳೂರು, ಫೆ. 17 (DaijiworldNews/AK): ಕಾಂಗ್ರೆಸ್ ಸರಕಾರವು ಬಡವರಿಗೆ ಮನೆ ಕೊಡಬೇಕು; ಭೂರಹಿತರಿಗೆ ಭೂಮಿ ಕೊಡಬೇಕಿತ್ತು. ಆದರೆ, ಈ ಕೆಲಸವನ್ನು ಮಾಡುತ್ತಿಲ್ಲ. ತಾನೇ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಭೂಕಬಳಿಕೆಯಲ್ಲಿ ಸರಕಾರವೇ ನಿರತವಾಗಿದೆ. ಸರಕಾರವು ತಾಲ್ಲೂಕು, ಜಿಲ್ಲೆ, ಮಂಡಲ, ಪಂಚಾಯಿತಿ- ಹೀಗೆ ಎಲ್ಲ ಕಡೆ ನಿವೇಶನ ಪಡೆಯಲು ಅದಕ್ಕೆ ಅಧಿಕಾರ ಇಲ್ಲ. ಕಾನೂನು ಉಲ್ಲಂಘಿಸಿ ಅದು ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಲೀಸ್ಗೆ ಮುಧೋಳದಲ್ಲಿ ನಿವೇಶನ ಪಡೆಯಲು ಮುಂದಾಗಿತ್ತು. ಆದರೆ, ಇಲಾಖೆಯು ಅದನ್ನು ತಿರಸ್ಕರಿಸಿತ್ತು ಎಂದು ಗಮನ ಸೆಳೆದರು.
ಚಿಕ್ಕಬಳ್ಳಾಪುರದಲ್ಲಿ ಒಂದು ಸಿಎ ನಿವೇಶನವನ್ನು ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಪಡೆಯಲು ಮುಂದಾಗಿತ್ತು. 3,404 ಚದರ ಮೀಟರ್ನ 4 ಕೋಟಿ 8 ಲಕ್ಷ 51,120 ರೂ. ಬೆಲೆಯ ನಿವೇಶನ ಇದಾಗಿದೆ. ಇದನ್ನು ಅವರು ತಮಗೆ ಪಡೆದುಕೊಂಡಿದ್ದಾರೆ. ಅವರದೇ ಪೆನ್, ಅವರದೇ ಪುಸ್ತಕ, ಅವರದೇ ಅಧಿಕಾರ, ಅವರೇ ಬರಕೊಳ್ಳುವುದು, 20 ಲಕ್ಷ 42,556 ರೂ.ಗೆ ಇದನ್ನು ಪಡೆದಿದ್ದಾರೆ. ಕೇವಲ ಶೇ 5 ಮೌಲ್ಯಕ್ಕೆ ಇದನ್ನು ತೆಗೆದುಕೊಂಡಿದ್ದಾಗಿ ಟೀಕಿಸಿದರು.
ತುಮಕೂರು, ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ- ಹೀಗೆ ಎಲ್ಲ ಜಿಲ್ಲೆಗಳಲ್ಲಿ ನಿವೇಶನವನ್ನು ತೆಗೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಬಾದಾಮಿಯಲ್ಲಿ 613 ಚದರ ಮೀಟರ್ನ ನಿವೇಶನಕ್ಕೆ 24 ಲಕ್ಷದ 52 ಸಾವಿರ ಮೌಲ್ಯದ ಬದಲಾಗಿ 1 ಲಕ್ಷ 22 ಸಾವಿರಕ್ಕೆ ಪಡೆದಿದ್ದಾರೆ. ಇದು ಕೂಡ ಶೇ 5ರಷ್ಟಿದೆ. ಕೊಪ್ಪಳದಲ್ಲಿ 1 ಕೋಟಿ 31 ಲಕ್ಷದ 31,975 ರೂ. ಬದಲು 6,56,598 ರೂ.ಗೆ ಅಂದರೆ ಶೇ 5 ದರಕ್ಕೆ ಪಡೆದಿದ್ದಾರೆ. ಚನ್ನರಾಯಪಟ್ಟಣದಲ್ಲಿ 1.36 ಲಕ್ಷಕ್ಕೆ ತೆಗೆದುಕೊಂಡಿದ್ದಾರೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1 ಕೋಟಿ 45 ಲಕ್ಷ 78 ಸಾವಿರದ ನಿವೇಶನವನ್ನು 7 ಲಕ್ಷ 28 ಸಾವಿರಕ್ಕೆ ಬರೆದುಕೊಂಡಿದ್ದಾರೆ.
ಗೌರಬಿದನೂರಿನಲ್ಲಿ 90 ಲಕ್ಷ 80,900 ರೂ ಬೆಲೆಯ ನಿವೇಶನವನ್ನು 4 ಲಕ್ಷ 54 ಸಾವಿರಕ್ಕೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಸೌಕರ್ಯಕ್ಕಾಗಿ ಇರುವ ನಿವೇಶನಗಳಿವು ಎಂದು ಗಮನಕ್ಕೆ ತಂದರು.
ಮಾನ್ವಿಯಲ್ಲಿ 37 ಲಕ್ಷ 87,500 ರೂ. ನಿವೇಶನವನ್ನು 1 ಲಕ್ಷ 89 ಸಾವಿರ, ಶಹಾಪುರದಲ್ಲಿ 95 ಲಕ್ಷ 71,144 ರೂ. ಸೈಟನ್ನು 4 ಲಕ್ಷ 78 ಸಾವಿರ ಅಂದರೆ ಕೇವಲ ಶೇ 5 ಮೌಲ್ಯಕ್ಕೆ ಪಡೆದಿದ್ದು, ಬಸವಕಲ್ಯಾಣದಲ್ಲಿ ಹಾಗೇ ಮಾಡಿದ್ದಾರೆ. ಅಲ್ಲಿ ದರ ವಿಧಿಸಿಲ್ಲ. ಲಿಂಗಸುಗೂರಿನಲ್ಲಿ 46 ಲಕ್ಷ 99,200 ರೂ. ದನ್ನು 2 ಲಕ್ಷ 34ಕ್ಕೆ ಬರೆದುಕೊಂಡಿದ್ದಾರೆ. ತುಮಕೂರು ಪಾಲಿಕೆ ವ್ಯಾಪ್ತಿಯಲ್ಲಿ 1 ಕೋಟಿ 70 ಸಾವಿರದ ನಿವೇಶನವನ್ನು 8 ಲಕ್ಷ 50 ಸಾವಿರಕ್ಕೆ ಬರೆದುಕೊಂಡಿದ್ದಾರೆ ಎಂದು ದೂರಿದರು.