ಬೆಂಗಳೂರು, ಜೂ30 (Daijiworld News/RD): ಕರ್ನಾಟಕ ರಾಜ್ಯದ 6,000 ಕ್ಕೂ ಮಿಕ್ಕಿ ಗ್ರಾಮ ಪಂಚಾಯತಿಗಳಿಗೆ ಸೇರಿದಂತ ವಿವಿಧ ಗ್ರಂಥಾಲಯಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಸರ್ಕಾರ 13,200 ವೇತನ ನಿಗದಿಗೊಳಿಸಿ, ನಂತರ ಕೆಲಸದ ಅವಧಿ ಕಡಿಮೆಗೊಳಿಸಿ ಪೂರ್ಣ ವೇತನ ನೀಡದಿರುವುದರಿಂದ ಬಡ ಗ್ರಂಥಪಾಲಕರ ಬದುಕು ಬೀದಿಗೆ ಬಿದ್ದಂತಾಗಿದೆ.
ದುರಂತವೆಂದರೆ ಒಂದು ತಿಂಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಂಥಪಾಲಕ ರೇವಣ್ಣ ಕುಮಾರ್ ಇದೇ ವಿಧಾನ ಸೌಧದ ಮೂರನೆ ಮಹಡಿಯಲ್ಲಿ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಘಟನೆ ಗ್ರಂಥಪಾಲಕರ ದಾರುಣ ಬದುಕಿಗೆ ಸಾಕ್ಷಿಯಾಗಿದೆ. ಆದ್ದರಿಂದ ಬಡ ಸಿಬ್ಬಂದಿಗಳ ಪಾಲಿಗೆ ತಾವು ನೆರವಿತ್ತು ತಕ್ಷಣ ಗ್ರಂಥಪಾಲಕರಿಗೆ.13,200 ರೂ ಕನಿಷ್ಠ ವೇತನ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ನೂತನ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ವಿಧಾನ ಸೌಧದಲ್ಲಿ ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದರು.
ಕೋಟ ಅವರ ಮನವಿಯನ್ನು ಆಲಿಸಿದ ಮುಖ್ಯಮಂತ್ರಿಯವರು ತಕ್ಷಣ ಬಡ ಸಿಬ್ಬಂದಿಗಳಿಗೆ 13,200/- ಕನಿಷ್ಠ ವೇತನ ನೀಡಲು ಸರ್ಕಾರದ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಬಹುಶಃ ಇನ್ನೊಂದು ವಾರದಲ್ಲಿ ಗ್ರಂಥಪಾಲಕರಿಗೆ ವೇತನ ಪರಿಷ್ಕರಿಸಿ ಅಧಿಕೃತ ಆದೇಶ ಬರಬಹುದು ಎಂದು ಕೋಟ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.