ಮುಂಬೈ,ಫೆ. 17 (DaijiworldNews/AK): ‘ಸ್ನೇಹಮಂಟೆ ಇದೆರ’, ‘ರಾಯುಡು’, ‘ಕಲಸುಕೋವಾಲನಿ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಆಗಿನ ಸ್ಟಾರ್ ನಟರುಗಳ ಜೊತೆಗೆ ನಾಯಕಿಯಾಗಿ ನಟಿಸಿದ್ದ ನಟಿ ಪ್ರತ್ಯುಷ, ಸ್ಟಾರ್ ನಟಿಯಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ 2002ರ ಫೆಬ್ರವರಿ 22 ರಂದು ನಟಿ ಅನುಮಾನಾಸ್ಪದವಾಗಿ ನಿಧನ ಹೊಂದಿದರು.

ಅವರ ಸಾವು ಆಗ ಅವಿಭಜಿತ ಆಂಧ್ರ ಪ್ರದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ 24 ವರ್ಷಗಳ ಬಳಿಕ ನಟಿಯ ಸಾವಿನ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ. ಪ್ರತ್ಯುಷ ಸಾವಿನ ಪ್ರಕರಣದಲ್ಲಿ ನಟಿಯ ಗೆಳೆಯನಾಗಿದ್ದ ಸಿದ್ಧಾರ್ಥ್ ರೆಡ್ಡಿ ದೋಷಿ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಸಾವಿಗೀಡಾಗಿರುವ ನಟಿ ಪ್ರತ್ಯುಷ ಹಾಗೂ ಈಗ ಶಿಕ್ಷೆಗೆ ಗುರಿಯಾಗಿರುವ ಸಿದ್ಧಾರ್ಥ್ ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರ ಮದುವೆಗೆ ಸಿದ್ಧಾರ್ಥ್ ರೆಡ್ಡಿ ಕುಟುಂಬದವರು ಒಪ್ಪಲಿಲ್ಲವೆಂದು ಇಬ್ಬರೂ ಸಹ ಕೂಲ್ಡ್ರಿಂಕ್ಸ್ನಲ್ಲಿ ವಿಷ ಬೆರೆಸಿ ಕುಡಿದಿದ್ದು, ಪ್ರತ್ಯುಷ ಸಾವಿಗೀಡಾದರೆ, ಸಿದ್ಧಾರ್ಥ್ ರೆಡ್ಡಿ ಬದುಕಿ ಉಳಿದಿದ್ದರು ಎನ್ನಲಾಗಿತ್ತು. ಆದರೆ ಇದನ್ನು ಒಪ್ಪದ ಪ್ರತ್ಯುಷ ತಾಯಿ ಸರೋಜಿನಿ ನ್ಯಾಯಾಲಯಗಳ ಮೂಲಕ ಸತತ ಹೋರಾಟ ಮಾಡಿ ಇದೀಗ ಕೊನೆಗೂ ಸಿದ್ಧಾರ್ಥ್ಗೆ ಶಿಕ್ಷೆ ಆಗುವಂತೆ ಮಾಡಿದ್ದಾರೆ.