ಬೆಂಗಳೂರು, ಫೆ. 18 (DaijiworldNews/AA): ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಮಾಡಿರೋ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, "ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ದೇಶಾದ್ಯಂತ 'ಅಭಿವ್ಯಕ್ತಿ ಸ್ವಾತಂತ್ರ್ಯ'ದ ಭಾಷಣ ಮಾಡುವ ರಾಹುಲ್ ಗಾಂಧಿ ಅವರೇ, ಒಮ್ಮೆ ನಿಮ್ಮದೇ ಪಕ್ಷದ ಆಡಳಿತವಿರುವ ಕರ್ನಾಟಕದತ್ತ ನೋಡಿ" ಎಂದು ವಾಗ್ದಾಳಿ ನಡೆಸಿದ್ದಾರೆ.
"ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವುದು ಯಾವ 'ಸಂವಿಧಾನ'ದ ನಿಯಮ ರಾಹುಲ್ ಗಾಂಧಿ ಅವರೇ? ಮೊದಲು ಕರ್ನಾಟಕ ಸರ್ಕಾರಕ್ಕೆ ಸಂವಿಧಾನದ ಪಾಠ ಮಾಡಿ. ಮಾಧ್ಯಮಗಳನ್ನು ಪಂಜರದಲ್ಲಿ ಇಡಲು ಹೊರಟಿರುವ ಈ ಕರಾಳ ಸುತ್ತೋಲೆ ಅಪ್ಪಟ 'ತುರ್ತು ಪರಿಸ್ಥಿತಿ'ಯ ಮುಂದುವರಿದ ಭಾಗ" ಎಂದು ಕಿಡಿಕಾರಿದ್ದಾರೆ.