ಭೋಪಾಲ್, ಫೆ. 18 (DaijiworldNews/TA): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಸಂರಕ್ಷಣಾ ಯೋಜನೆಗೆ ಮತ್ತೊಂದು ಸಂತಸದ ಸುದ್ದಿ ಲಭಿಸಿದೆ. ಎರಡು ವರ್ಷಗಳ ಹಿಂದೆ ಐದು ಮರಿಗಳಿಗೆ ಜನ್ಮ ನೀಡಿದ್ದ ‘ಗಾಮಿನಿ’ ಚೀತಾ ಇದೀಗ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡಿದೆ. ಇದರೊಂದಿಗೆ ಉದ್ಯಾನವನದಲ್ಲಿನ ಒಟ್ಟು ಚೀತಾಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

‘ಗಾಮಿನಿ’ಯನ್ನು 2022ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿತ್ತು. ಆಗ ಗಾಮಿನಿಗೆ ಐದು ವರ್ಷ ವಯಸ್ಸಾಗಿತ್ತು. ಚೀತಾ ಮರುಪರಿಚಯ ಕಾರ್ಯಕ್ರಮದ ಭಾಗವಾಗಿ ತರಲಾದ ಈ ಚೀತಾ, ಕಳೆದ ಎರಡು ವರ್ಷಗಳಲ್ಲಿ ಒಟ್ಟು ಎಂಟು ಮರಿಗಳಿಗೆ ಜನ್ಮ ನೀಡಿರುವುದು ಗಮನಾರ್ಹವಾಗಿದೆ.
ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆಮದು ಮಾಡಿಕೊಂಡ ನಂತರ ಭಾರತದಲ್ಲಿ ಜನಿಸಿದ ಚೀತಾಗಳ ಸಂಖ್ಯೆ ಈಗ 27ಕ್ಕೆ ತಲುಪಿದ್ದು, ಒಟ್ಟು ಸಂಖ್ಯೆ 38 ಆಗಿದೆ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆ ಭಾರತದಲ್ಲಿ ನಡೆಯುತ್ತಿರುವ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳಿಗೆ ಬಲ ತುಂಬಿದೆ.
1952ರಲ್ಲಿ ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಗಿತ್ತು. ನಂತರ ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಪುನಃ ಪರಿಚಯಿಸುವ ಯೋಜನೆಯಡಿ ನಮೀಬಿಯಾದಿಂದ ಮೂರು ಗಂಡು ಹಾಗೂ ಐದು ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ತರಲಾಗಿತ್ತು. 2022ರ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದ್ದರು.
ಆರಂಭಿಕ ಅವಧಿಯಲ್ಲಿ ಸುಮಾರು ಹತ್ತು ಚೀತಾಗಳು ಸಾವಿಗೀಡಾದರೂ, ನಂತರ ಸಂತತಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಳೆದ ವರ್ಷ ‘ಮುಖಿ’ ಹೆಸರಿನ ಚೀತಾ ಐದು ಮರಿಗಳಿಗೆ ಜನ್ಮ ನೀಡಿದ್ದು ವಿಶೇಷವಾಗಿತ್ತು. ಇದೀಗ ‘ಗಾಮಿನಿ’ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡಿರುವುದು ಚೀತಾ ಮರುಪರಿಚಯ ಯೋಜನೆಗೆ ಮಹತ್ವದ ಉತ್ತೇಜನವಾಗಿದೆ.