ನವದೆಹಲಿ, ಫೆ. 18 (DaijiworldNews/AK): ದೇಶಭ್ರಷ್ಟ ವಿಜಯ್ ಮಲ್ಯ ಒಂದು ವೇಳೆ ತನ್ನ ವಿರುದ್ಧದ ಕಾನೂನಿನ ಅರ್ಜಿಯ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಇಚ್ಛೆಯನ್ನು ಹೊಂದಿದ್ದರೆ ಅವರು ಭಾರತಕ್ಕೆ ಮರಳಬೇಕು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಎಂದು ಬಾಂಬೆ ಹೈಕೋರ್ಟ್ ತಿಳಿಸಿತ್ತು.

ಇದಕ್ಕೆ ಮಾಜಿ ಮದ್ಯದ ದೊರೆ ವಿಜಯ್ ಮಲ್ಯ ಇಂದು ಬಾಂಬೆ ಹೈಕೋರ್ಟ್ಗೆ ಇದಕ್ಕೆ ಉತ್ತರ ತಿಳಿಸಿದ್ದು, ತಾನು ಯಾವಾಗ ಭಾರತಕ್ಕೆ ಮರಳುತ್ತೇನೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸುವ ಸ್ಥಿತಿಯಲ್ಲಿಲ್ಲ ಎಂದು ಇಂಗ್ಲೆಂಡ್ನಲ್ಲಿ ಹೊರಡಿಸಲಾದ ನ್ಯಾಯಾಲಯದ ಆದೇಶಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
ವಿಜಯ್ ಮಲ್ಯ ಅವರ ಅರ್ಜಿಯು ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿದೆ. ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ನೇತೃತ್ವದ ಬಾಂಬೆ ಹೈಕೋರ್ಟ್ ಪೀಠವು ಮಲ್ಯ ಅವರಿಗೆ ಮರಳಲು ಉದ್ದೇಶಿಸಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಅಂತಿಮ ಅವಕಾಶವನ್ನು ನೀಡಿತು. “ನೀವು ಹಿಂತಿರುಗಲೇಬೇಕು. ನೀವು ವಾಪಾಸ್ ಬರದಿದ್ದರೆ, ನಾವು ನಿಮ್ಮ ಅರ್ಜಿಯ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನೀವು ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದೀರಿ. ಆದ್ದರಿಂದ ನೀವು ನ್ಯಾಯಾಲಯದ ವಿಚಾರಣೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಾ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ. ಆದರೆ, ನ್ಯಾಯಯುತವಾಗಿ, ನಾವು ನಿಮ್ಮ ಪ್ರಕರಣವನ್ನು ವಜಾಗೊಳಿಸುತ್ತಿಲ್ಲ. ನಿಮಗೆ ಮತ್ತೊಂದು ಅವಕಾಶವನ್ನು ನೀಡುತ್ತಿದ್ದೇವೆ” ಎಂದು ಬಾಂಬೆ ಹೈಕೋರ್ಟ್ ಹೇಳಿತ್ತು.
ವಿಜಯ್ ಮಲ್ಯ ಅವರು ಭಾರತಕ್ಕೆ ಹಿಂತಿರುಗುತ್ತಾರೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳುವ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ. “ನೀವು ಯಾವಾಗ ಬರುತ್ತೀರಿ? ನ್ಯಾಯಾಲಯದಲ್ಲಿ ನಿಮ್ಮ ದೈಹಿಕ ಉಪಸ್ಥಿತಿಯಿಲ್ಲದೆ ನೀವು ವಿಚಾರಣೆಗೆ ಅರ್ಹರು ಎಂದು ಈಗಾಗಲೇ ವಾದಿಸಿದ್ದೀರಿ. ಆದರೆ ಮೊದಲು ಅದನ್ನು ಸ್ಪಷ್ಟವಾಗಿ ಹೇಳುವ ಅಫಿಡವಿಟ್ ಸಲ್ಲಿಸಿ” ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಹೇಳಿದ್ದರು.
ತಮ್ಮ ವಿರುದ್ಧದ ವಿಚಾರಣೆಗಳು ವಿದೇಶದಲ್ಲಿ ನಡೆಯುತ್ತಿರುವುದರಿಂದ ಯುಕೆ ನ್ಯಾಯಾಲಯಗಳು ವಿಧಿಸಿರುವ ನಿರ್ಬಂಧಗಳ ಕಾರಣದಿಂದಾಗಿ ನನಗೆ ಭಾರತಕ್ಕೆ ಪ್ರಯಾಣವ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿಜಯ್ ಮಲ್ಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.