ಬೆಂಗಳೂರು,ಫೆ. 18 (DaijiworldNews/AK): ರಾಜ್ಯದ ಕಾಂಗ್ರೆಸ್ ಸರಕಾರವು ವಿಧಾನಸೌಧದ ಒಳಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು, ಇದು ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಭಾಷಣ ಮಾಡುವಾಗ ಪತ್ರಿಕಾ ರಂಗ ಸಂವಿಧಾನದ ನಾಲ್ಕನೇ ಅಂಗ ಎನ್ನುತ್ತೇವೆ. ಇದನ್ನು ನೋಡಿದರೆ ತುರ್ತು ಪರಿಸ್ಥಿತಿ ಜ್ಞಾಪಕ ಬರುತ್ತಿದೆ. ಅವತ್ತು ಮಾಧ್ಯಮಗಳಿಗೆ ಕಡಿವಾಣ ಹಾಕಿದ್ದರು ಎಂದು ಗಮನ ಸೆಳೆದರು.
ನಿಮ್ಮ ಭದ್ರತಾ ಲೋಪ ಸರಿ ಮಾಡಿಕೊಳ್ಳಿ ಎಂದ ಅವರು, ಸರಕಾರವು ಸುತ್ತೋಲೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಕಸದ ಸಮಸ್ಯೆ ಕುರಿತು ಮಾಧ್ಯಮಗಳು ಗಮನ ಸೆಳೆದಾಗ ಉತ್ತರ ನೀಡಿದ ಅವರು, ಆಧುನಿಕ ತಂತ್ರಜ್ಞಾನ ತರುತ್ತೇವೆ; ವಿದ್ಯುತ್ ಆಗಿ ಪರಿವರ್ತಿಸುವುದಾಗಿ ಸರಕಾರ ಹೇಳಿತ್ತು. ಇಲ್ಲಿನವರೆಗೂ ಯಾವುದನ್ನೂ ಮಾಡಿಲ್ಲ ಎಂದು ಟೀಕಿಸಿದರು. ಹಿಂದೆ ಬಿಜೆಪಿ ಸರಕಾರ ಇದ್ದಾಗ ಏನಿತ್ತೋ ಹಾಗೇ ಇದೆ. ಕಸ ಹಾಕುವ ಹೊಸ ಘಟಕ ಮಾಡಿಲ್ಲ ಎಂದು ಆರೋಪಿಸಿದರು.
ಸರಕಾರವು ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡಬೇಕೆಂದು ಆಗ್ರಹಿಸಿದರು. ವಿಧಾನಸಭಾ ಚುನಾವಣೆ ಹತ್ತಿರದಲ್ಲಿಲ್ಲ. ಮೈತ್ರಿ, ನಾಯಕತ್ವ ವಿಚಾರವಾಗಿ ರಾಷ್ಟ್ರೀಯ ನಾಯಕರ ನಿರ್ಧಾರ ಏನಿದೆಯೋ ಅದಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇವೆ. ಅದಕ್ಕೆ ವ್ಯತಿರಿಕ್ತವಾಗಿ ಮಾತನಾಡಲು ಹೋಗುವುದಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಸದ್ಯಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಪ್ರಶ್ನೆ ನಮ್ಮ ಮುಂದಿದೆ. ರಾಜ್ಯ- ರಾಷ್ಟ್ರದ ವರಿಷ್ಠರು ಏನು ಹೇಳುತ್ತಾರೋ ಅದರ ಕುರಿತು ನಾವು ಚಿಂತೆ ಮಾಡುತ್ತೇವೆ. ಯಾರೋ ಚರ್ಚೆ ಹುಟ್ಟು ಹಾಕಿದ್ದಾರೆ ಎಂದು ತಿಳಿಸಿದರು.
ಈ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸುವುದು ಒಳ್ಳೆಯದು. ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲ್ಲುವ ಕಡೆ ನಾವು ಗಮನ ಹರಿಸಬೇಕಿದೆ ಎಂದು ತಿಳಿಸಿದರು.