ಬೆಂಗಳೂರು, ಜು30(Daijiworld News/SS): ವ್ಯವಹಾರಿಕವಾಗಿ ನನಗೆ ಸಾಕಷ್ಟು ನಷ್ಟವಾಗಿದೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಹಾಗೆಂದು ಯಾರಿಗೂ ಮೋಸ ಮಾಡುವ ಉದ್ದೇಶ ನನಗಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕೆಫೆ ಕಾಫಿ ಡೇ ನಿರ್ದೇಶಕ ಮಂಡಳಿಯ ಸದಸ್ಯರಿಗೆ ಸಿದ್ಧಾರ್ಥ ಜು.27ರಂದು ಇ-ಮೇಲ್ ರವಾನಿಸಿದ್ದರು ಎಂದು ಉನ್ನತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ, ಉದ್ಯಮಿ ವಿ.ಜಿ.ಸಿದ್ಧಾರ್ಥ್ ಹೆಗ್ಡೆ ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಬಲವಾಗುತ್ತಿದೆ. ಅವರು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ತಮ್ಮ ಒಡೆತನದ ಕೆಫೆ ಕಾಫಿ ಡೇ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಜಾವೇದ್ ಎಂಬುವವರಿಗೆ ಸಿದ್ಧಾರ್ಥ್ ಕೊನೆಯ ಕರೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಮೊಬೈಲ್ ಸ್ವಿಚ್ ಆಫ್ ಆಗುವ ಮುನ್ನ ಕೊನೆಯ ಕರೆಯನ್ನು ಜಾವೇದ್ ಅವರಿಗೆ ಮಾಡಿದ್ದಾರೆ. ಕಂಪೆನಿಯ ಹಣಕಾಸು ವಿಚಾರಗಳ ಕುರಿತು ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಆ ಬಳಿಕವೇ ಸಿದ್ಧಾರ್ಥ್ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2 ದಿನಗಳ ಹಿಂದೆ ತಮ್ಮ ಕಂಪನಿಯ ನೌಕರರಿಗೆ ಸಿದ್ದಾರ್ಥ್ ಬರೆದಿರುವ ಪತ್ರದಲ್ಲಿ, ಐಟಿಯ ಹಿಂದಿನ ಡಿಜಿ ತಮಗೆ ಅತಿ ಹೆಚ್ಚು ಕಿರುಕುಳ ನೀಡಿದ್ದಾರೆ. 2 ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದರು. ಇದರಿಂದ ನನ್ನ ಮೈಂಡ್ ಟ್ರೀ ಕಂಪನಿಯ ಶೇರು ಮಾರಾಟ ಮಾಡಲು ಸಮಸ್ಯೆಯಾಯಿತು. ಅದಾದ ಬಳಿಕೆ ಕಾಫಿ ಡೇ ಷೇರುಗಳ ಮೇಲೆ ಕಣ್ಣು ಬಿತ್ತು. ಆದಾಯ ತೆರಿಗೆ ಇಲಾಖೆಯಿಂದ ನಿರಂತರವಾಗಿ ನನಗೆ ಕಿರುಕುಳ ನೀಡಲಾಯಿತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಮಂಗಳೂರಿಗೆ ತೆರಳಲು ಮುಂದಾಗಿದ್ದ ಸಿದ್ಧಾರ್ಥ ಅವರು ತೊಕ್ಕೊಟ್ಟು ಸೇತುವೆ ಬಳಿ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದರು. ಬಳಿಕ ಮೊಬೈಲ್ಫೋನ್ನಲ್ಲಿ ಮಾತನಾಡುತ್ತಾ ಸೇತುವೆಯ ಮಧ್ಯಭಾಗಕ್ಕೆ ತೆರಳಿದ್ದ ಅವರು, ನಂತರ ಕಣ್ಮರೆಯಾಗಿದ್ದರು. ತುಂಬಾ ಹೊತ್ತು ಕಾದ ಬಳಿಕ ಅವರ ಮೊಬೈಲ್ಫೋನ್ಗೆ ಚಾಲಕ ಕರೆ ಮಾಡಿದಾಗ, ಅದು ಸ್ವಿಚ್ಆಫ್ ಆಗಿತ್ತು. ತಕ್ಷಣವೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಸಿದ್ಧಾರ್ಥ್ ಅವರು ನೇತ್ರಾವತಿ ನದಿಗೆ ಹಾರಿರುವ ಶಂಕೆಯಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಮತ್ತು ಮುಳುಗು ತಜ್ಞರು ನೇತ್ರಾವತಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.