ತೆಲಂಗಾಣ, ಫೆ. 19 (DaijiworldNews/AA): ಯುಪಿಎಸ್ಸಿ ಪರೀಕ್ಷೆಯಲ್ಲಿ ಸತತ ಹಿನ್ನಡೆ ಉಂಟಾದರೂ ತಮ್ಮ ಪ್ರಯತ್ನ ಕೈಬಿಡದೆ ದೃಢ ಸಂಕಲ್ಪ, ಏಕಾಗ್ರತೆಯಿಂದ 2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ 62ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ಶ್ರವಣ್ ಕುಮಾರ್ ರೆಡ್ಡಿ ಅವರ ಯಶೋಗಾಥೆ ಇದು.

ತೆಲಂಗಾಣ ಮೂಲದವರಾದ ಶ್ರವಣ್, ಹೈದರಾಬಾದ್ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ಪ್ರತಿಷ್ಠಿತ ಐಐಟಿ ಬಾಂಬೆ ಸಂಸ್ಥೆಯಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಪದವಿಗಳನ್ನು ಪಡೆದರು.
2022ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಶ್ರವಣ್ ಅವರು, 426ನೇ ರ್ಯಾಂಕ್ ಗಳಿಸಿದರು. ಬಳಿಕ ಸತತ ಪ್ರಯತ್ನಗಳಲ್ಲಿ ಹಿನ್ನಡೆಯುಂಟಾದರೂ ಧೃತಿಗೆಡದೆ 2024ರಲ್ಲಿ ಪುನಃ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 62ನೇ ರ್ಯಾಂಕ್ ಗಳಿಸುವ ಮೂಲಕ ಉತ್ತೀರ್ಣರಾಗುತ್ತಾರೆ.
ಶ್ರವಣ್ ಅವರು ಯುಪಿಎಸ್ಸಿ ಪರೀಕ್ಷೆಗೆ ತಮ್ಮ ಐಚ್ಛಿಕ ವಿಷಯವಾಗಿ ಗಣಿತವನ್ನು ಆರಿಸಿಕೊಂಡಿದ್ದರು. 2024ರ ಪರೀಕ್ಷೆಯ ಗಣಿತ ಪತ್ರಿಕೆ-1ರಲ್ಲಿ 151 ಮತ್ತು ಪತ್ರಿಕೆ-2ರಲ್ಲಿ 169 ಅಂಕಗಳನ್ನು ಪಡೆಯುವ ಮೂಲಕ ಅವರು ಉತ್ತಮ ಸಾಧನೆ ಮಾಡಿದ್ದಾರೆ.