ನವದೆಹಲಿ, ಜು30(Daijiworld News/SS): ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರು ನಾಪತ್ತೆಯಾಗಿದ್ದು, ಉಳ್ಳಾಲ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಸಿದ್ದಾರ್ಥ್ ಶೋಧ ಕಾರ್ಯಾಚರಣೆಗೆ ನೌಕಾಪಡೆ ನೆರವು ನೀಡುವಂತೆ ಕೋರಿ ಸಂಸದರು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಸಿದ್ಧಾರ್ಥ್ ಅವರ ಪತ್ತೆಗೆ ಹೆಚ್ಚಿನ ಕಾರ್ಯಾಚರಣೆ ನಡೆಸುವ ಸಲುವಾಗಿ ಕರಾವಳಿ ರಕ್ಷಣಾ ಪಡೆ, ಕೇಂದ್ರ ದಳ, ಹಾಗೂ ಹೆಲಿಕಾಪ್ಟರ್ ಅನ್ನು ಒದಗಿಸುವಂತೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರದಿಂದ ಬಿರುಸಿನ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನು ಹೆಚ್ಚಿನ ಕಾರ್ಯಚರಣೆಗೆ ಶೋಭಾ ಕರಂದ್ಲಾಜೆ ಸೇರಿದಂತೆ ನಳೀನ್ ಕುಮಾರ್ ಕಟೀಲ್, ಸಂಗಣ್ಣ ಕರಡಿ, ಪಿ.ಸಿ. ಗದ್ದಿಗೌಡ ಅವರು ವಿನಂತಿ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ನಗರದಿಂದ ಉಳ್ಳಾಲ ಕಡೆಗೆ ಹೋಗುವ ಮಾರ್ಗದಲ್ಲಿರುವ ನೇತ್ರಾವತಿ ಸೇತುವೆ ಬಳಿಯಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ್ ನಾಪತ್ತೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರಿಂದ ತೀವ್ರ ಶೋಧ ನಡೆಸಲಾಗುತ್ತಿದೆ.
ಬೆಂಗಳೂರು ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿದ್ದ ಸಿದ್ದಾರ್ಥ್ ನೇತ್ರಾವತಿ ಸೇತುವೆ ಮೇಲೆ ತೆರಳುತ್ತಿದ್ದಾಗ ಕಡೆಕಾರು ರಸ್ತೆಯಲ್ಲಿ ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರು ನಿಲ್ಲಿಸಲು ಹೇಳಿ, ಮೊಬೈಲ್'ನಲ್ಲಿ ಮಾತನಾಡುತ್ತಾ ಕಾರಿನಿಂದ ಇಳಿದು ಮುಂದಕ್ಕೆ ಹೋಗಿದ್ದಾರೆ. ಆ ಬಳಿಕ ನಾಪತ್ತೆ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಾರಿನಿಂದ ಇಳಿದ ಸಿದ್ದಾರ್ಥ್ ನಾಪತ್ತೆಯಾಗಿದ್ದು, ನೇತ್ರಾವತಿ ನದಿಗೆ ಹಾರಿರಬಹುದು ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.
ಉಳ್ಳಾಲ ಬಳಿಯ ನೇತ್ರಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಶವ ಪತ್ತೆ ಕಾರ್ಯಕ್ಕೆ ಸ್ವಲ್ಪ ಅಡ್ಡಿಯುಂಟಾಗಿದೆ ಎನ್ನಲಾಗಿದೆ. ಆದರೂ ತಣ್ಣೀರುಬಾವಿ ಮುಳುಗು ತಜ್ಞರು ಬಿಟ್ಟೂ ಬಿಡದಂತೆ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಸಿದ್ಧಾರ್ಥ ನಾಪತ್ತೆಯಾಗಿರುವ ನೇತ್ರಾವತಿ ನದಿ ದಡದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ನದಿ ಸೇರುವ ಅಳಿವೆಬಾಗಿಲು, ಬೆಂಗ್ರೆ ಸಮೀಪದಲ್ಲಿ ನಾಲ್ಕು ಬೋಟ್ಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಕೋಸ್ಟ್ ಗಾರ್ಡ್, ಎನ್ಡಿಆರ್ಎಫ್, ಗೃಹರಕ್ಷಕದಳ, ಅಗ್ನಿಶಾಮಕದಳ ಸೇರಿದಂತೆ 100ಕ್ಕೂ ಅಧಿಕ ಮಂದಿ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಅಷ್ಟೆ ಅಲ್ಲದೆ, ಸ್ಥಳಕ್ಕೆ ಮುಳುಗುತಜ್ಞರು ಆಗಮಿಸಿದ್ದಾರೆ.