ಬೆಂಗಳೂರು, ಫೆ. 19 (DaijiworldNews/AK): ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಉಸಿರಾಡುತ್ತಿದೆ. ಕರ್ನಾಟಕದಲ್ಲಿ ಅಭಿವೃದ್ಧಿ ಶೂನ್ಯ ಸ್ಥಿತಿ ಇದ್ದು, ಆಡಳಿತ ಪಕ್ಷದ ಶಾಸಕರೇ ಸರಕಾರದ ವಿರುದ್ಧ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಹಿಂದೂ ಕಾರ್ಯಕರ್ತರ, ದಲಿತರ ಹತ್ಯೆ ಆಗುತ್ತಿದೆ ಎಂದ ಅವರು, ಸುರತ್ಕಲ್, ಯಲ್ಲಾಪುರದಲ್ಲಿ ಆದ ಹತ್ಯೆಯನ್ನು ಉಲ್ಲೇಖಿಸಿದರು. ಯಲ್ಲಾಪುರದ ದಲಿತ ಮಹಿಳೆ ಹತ್ಯೆ, ಕೊಪ್ಪಳದಲ್ಲಿ ದಲಿತ ವ್ಯಕ್ತಿಯ ಹತ್ಯೆ ಆದರೂ ಪರಿಹಾರ ನೀಡಿಲ್ಲ ಎಂದು ಟೀಕಿಸಿದರು.
ಈ ಸರಕಾರ ಬಂದ ಬಳಿಕ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾವೇರಿ ನದಿಯ ಉಗಮಸ್ಥಾನ ಮೈಸೂರು ಮಾದಕವಸ್ತುಗಳಿಗೆ ಉಗಮ ಸ್ಥಾನವಾಗಿದೆ ಎಂದು ಆಕ್ಷೇಪಿಸಿದರು. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ದಸರಾ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡುವ ವ್ಯಕ್ತಿಯ ಕುಟುಂಬದ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ- ಕೊಲೆ ನಡೆದಿದೆ ಎಂದು ನೆನಪಿಸಿದರು.
ರಾಜ್ಯ ಸರಕಾರದ ಚಳಿ ಬಿಡಿಸುವ ಕೆಲಸ
ರಾಜ್ಯ ಸರಕಾರದ ಚಳಿ ಬಿಡಿಸುವ ಕೆಲಸವನ್ನು ವಿಪಕ್ಷವಾದ ಬಿಜೆಪಿ ರಾಜ್ಯ ಘಟಕ ಮಾಡುತ್ತಲೇ ಬಂದಿದೆ. ಮುಂದಿನ ದಿನಗಳದ್ದು ಅನೇಕ ಚುನಾವಣೆಗಳ ದಿನಗಳು. ಕಾರ್ಯಕರ್ತರ ಚುನಾವಣೆ ಮುಂದೆ ಬರಲಿದೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಬಿಎ ಚುನಾವಣೆಯೂ ಬರಲಿದೆ. ಈ ನಡುವೆ ವಿಧಾನಸಭೆಯ ಎರಡು ಉಪ ಚುನಾವಣೆಗಳು ಬರಲಿದೆ. ಬಾಗೇಪಲ್ಲಿ ಉಪ ಚುನಾವಣೆಯೂ ಇದ್ದು, ಸರಣಿ ಚುನಾವಣೆಗಳು ಮುಂದಿನ ಆರೇಳು ತಿಂಗಳು ನಡೆಯಲಿವೆ ಎಂದು ತಿಳಿಸಿದರು.