ಬೆಂಗಳೂರು, ಫೆ. 20 (DaijiworldNews/TA): ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ನಡೆಸುತ್ತಿರುವ ನಮ್ಮ ಮೆಟ್ರೋ ಯೆಲ್ಲೋ ಲೈನ್ನಲ್ಲಿ ಸಂಚರಿಸುತ್ತಿದ್ದ ಡ್ರೈವರ್ಲೆಸ್ ಮೆಟ್ರೋ ರೈಲು ಹಳಿ ತಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 15ರಂದು ಹೆಬ್ಬಗೋಡಿ ಡಿಪೋದಲ್ಲಿ ಈ ಅವಘಡ ಸಂಭವಿಸಿದ್ದು, ಡಿಪೋದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದತ್ತ ಸಾಗುತ್ತಿದ್ದ ವೇಳೆ ಮೂರನೇ ಡ್ರೈವರ್ಲೆಸ್ ರೈಲು ಹಳಿ ತಪ್ಪಿರುವುದು ಅಧಿಕಾರಿಗಳಿಂದ ದೃಢಪಟ್ಟಿದೆ.

ಘಟನೆಯ ಪರಿಣಾಮವಾಗಿ ಟ್ರ್ಯಾಕ್ ಸ್ಲೀಪರ್ಗಳು, ಮೂರನೇ ರೇಲ್, ಟ್ರ್ಯಾಕ್ಷನ್ ವ್ಯವಸ್ಥೆ ಹಾಗೂ ರೋಲಿಂಗ್ ಸ್ಟಾಕ್ ಘಟಕಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಅವಘಡದ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಮಾನವನ ಅಜಾಗರೂಕತೆಯೇ ಕಾರಣವೋ, ವ್ಯವಸ್ಥಾತ್ಮಕ ದೌರ್ಬಲ್ಯವೋ ಅಥವಾ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಉಂಟಾದ ದೋಷವೋ ಎಂಬುದರ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ. ರೈಲು ಆಪರೇಟರ್, ಡಿಪೋ ಕಂಟ್ರೋಲರ್ ಸೇರಿದಂತೆ ಸಂಬಂಧಿತ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಡಿಪೋ ವ್ಯಾಪ್ತಿಯಲ್ಲೇ ಸಂಭವಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ಘಟನೆ ಎಲಿವೇಟೆಡ್ ಕಾರಿಡಾರ್ ಮೇಲೆ ಸಂಭವಿಸಿದ್ದರೆ ಗಂಭೀರ ಅಪಾಯ ಉಂಟಾಗಬಹುದಾಗಿತ್ತು ಎಂಬ ಆತಂಕವೂ ವ್ಯಕ್ತವಾಗಿದೆ. ಈ ಹಿನ್ನೆಲೆ ಬಿಎಂಆರ್ಸಿಎಲ್ ಆರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿ ತನಿಖೆ ಆರಂಭಿಸಿದೆ.
ಆರ್.ವಿ. ರೋಡ್ನಿಂದ ಬೊಮ್ಮಸಂದ್ರವರೆಗೆ 19.15 ಕಿಲೋಮೀಟರ್ ಉದ್ದದ ಯೆಲ್ಲೋ ಲೈನ್ನಲ್ಲಿ ಸದ್ಯ ಎಂಟು ರೈಲುಗಳಿದ್ದು, ಅವುಗಳಲ್ಲಿ ಏಳು ರೈಲುಗಳು ನಿಯಮಿತ ಕಾರ್ಯಾಚರಣೆಯಲ್ಲಿವೆ. ಎಂಟನೇ ರೈಲಿನ ಪರೀಕ್ಷಾ ಓಡಾಟ ನಡೆಯುತ್ತಿದೆ. ಈ ಮಾರ್ಗಕ್ಕೆ 2025ರ ಆಗಸ್ಟ್ 10ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆಗಸ್ಟ್ 11ರಿಂದ ಸಾರ್ವಜನಿಕರಿಗೆ ಪ್ರಯಾಣಕ್ಕೆ ಮುಕ್ತಗೊಳಿಸಲಾಗಿತ್ತು.
ಡ್ರೈವರ್ಲೆಸ್ ತಂತ್ರಜ್ಞಾನವನ್ನು ಬಳಸಿಕೊಂಡು ಸಂಚರಿಸುವ ಈ ರೈಲುಗಳ ಸುರಕ್ಷತೆ ಕುರಿತು ಇದೀಗ ಪ್ರಶ್ನೆಗಳು ಉದ್ಭವಿಸಿವೆ. ಪ್ರಯಾಣಿಕರ ವಿಶ್ವಾಸವನ್ನು ಕಾಪಾಡಲು ಬಿಎಂಆರ್ಸಿಎಲ್ ತ್ವರಿತ ಹಾಗೂ ಪಾರದರ್ಶಕ ತನಿಖೆ ನಡೆಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.