ನವದೆಹಲಿ, ಫೆ. 20 (DaijiworldNews/TA): ಬಾಂಗ್ಲಾದೇಶದ ಹೊಸ ಪ್ರಧಾನಮಂತ್ರಿ ತಾರಿಕ್ ರೆಹಮಾನ್ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ, ಭಾರತ ತನ್ನ ವೀಸಾ ಸೇವೆಗಳನ್ನು ಸಂಪೂರ್ಣವಾಗಿ ಪುನರಾರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಹೊರಬಂದಿದೆ.

ಭಾರತದ ಹಿರಿಯ ಕಾನ್ಸುಲರ್ ಅಧಿಕಾರಿ ಅನಿರುದ್ಧ ದಾಸ್ ಈ ಕುರಿತು ಮಾತನಾಡಿ, ಪ್ರಸ್ತುತ ವೈದ್ಯಕೀಯ ಮತ್ತು ಡಬಲ್-ಎಂಟ್ರಿ ವೀಸಾಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರವಾಸಿ ವೀಸಾ ಸೇರಿದಂತೆ ಇತರ ವರ್ಗಗಳ ವೀಸಾಗಳನ್ನು ಸಹ ಶೀಘ್ರದಲ್ಲೇ ಮರು ಆರಂಭಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳು ಪರಸ್ಪರ ಗೌರವ ಮತ್ತು ಸಮಾನ ಘನತೆಯ ಮೇಲೆ ಆಧಾರಿತವಾಗಿವೆ ಎಂದು ಅವರು ಒತ್ತಿ ಹೇಳಿದರು.
ಹಿಂದೆ ವಿದ್ಯಾರ್ಥಿ ನಾಯಕ ಶರೀಫ್ ಒಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಪ್ರತಿಭಟನೆಗಳು ಕೆಲವೆಡೆ ಭಾರತ ವಿರೋಧಿ ಧೋರಣೆಯನ್ನು ತಾಳಿದ್ದವು. ಈ ಬೆಳವಣಿಗೆಗಳ ಹಿನ್ನೆಲೆ ಭಾರತವು 2025ರ ಡಿಸೆಂಬರ್ನಿಂದ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಆದರೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದ್ವಿಪಕ್ಷೀಯ ಸಂಬಂಧಗಳು ಸುಧಾರಣೆಯ ಹಾದಿ ಹಿಡಿದಿರುವುದರಿಂದ ಇದೀಗ ವೀಸಾ ಸೇವೆಗಳನ್ನು ಮರು ಆರಂಭಿಸುವ ನಿರ್ಧಾರಕ್ಕೆ ಭಾರತ ಮುಂದಾಗಿದೆ.
ಇದರ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಾರಿಕ್ ರೆಹಮಾನ್ ಅವರಿಗೆ ಔಪಚಾರಿಕ ಆಹ್ವಾನ ನೀಡಿದ್ದಾರೆ. ರೆಹಮಾನ್ ಅವರ ಪ್ರಮಾಣವಚನ ಸಮಾರಂಭದ ಬಳಿಕ ಲೋಕಸಭಾ ಅಧ್ಯಕ್ಷ ಒಮ್ ಬಿರ್ಲಾ ಢಾಕಾಕ್ಕೆ ಭೇಟಿ ನೀಡಿ ಮೋದಿ ಅವರ ಪತ್ರವನ್ನು ಹಸ್ತಾಂತರಿಸಿದ್ದರು. ಆ ಪತ್ರದಲ್ಲಿ ರೆಹಮಾನ್ ಅವರನ್ನು ಸೂಕ್ತ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ. ಹೊಸ ರಾಜಕೀಯ ಬೆಳವಣಿಗೆಗಳ ನಡುವೆ ಭಾರತ-ಬಾಂಗ್ಲಾದೇಶ ಸಂಬಂಧಗಳು ಮತ್ತೊಮ್ಮೆ ಬಲಪಡಿಸುವ ದಿಕ್ಕಿನಲ್ಲಿ ಸಾಗುತ್ತಿರುವುದಾಗಿ ರಾಜತಾಂತ್ರಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.