ದೆಹಲಿ, ಫೆ. 20 (DaijiworldNews/AA): ಭಾರತವು ಇಂದು ಅಮೆರಿಕ ನೇತೃತ್ವದ ಜಾಗತಿಕ ತಂತ್ರಜ್ಞಾನ ಮೈತ್ರಿಕೂಟವಾದ 'ಪ್ಯಾಕ್ಸ್ ಸಿಲಿಕಾ'ಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ. ಇದು ಸೆಮಿಕಂಡೆಕ್ಟರ್, ನಿರ್ಣಾಯಕ ಖನಿಜಗಳು ಹಾಗೂ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದಲ್ಲಿ ಸಹಯೋಗವನ್ನು ವಿಸ್ತರಿಸುವಲ್ಲಿ ಪೂರಕವಾಗಿಲಿದೆ.

ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಅಮೆರಿಕ ರಾಜ್ಯ ಸಚಿವಾಲಯದ ಆರ್ಥಿಕ ವಿಷಯಗಳ ಅಂಡರ್ ಸೆಕ್ರೆಟರಿ ಜೇಕಬ್ ಹೆಲ್ಬರ್ಗ್ ಮತ್ತು ಅಮೆರಿಕಾದ ಭಾರತದ ರಾಯಭಾರಿ ಸರ್ಜಿಯೊ ಗೋರ್ ಅವರು 'ಪ್ಯಾಕ್ಸ್ ಸಿಲಿಕಾ' ಘೋಷಣೆಗೆ ಸಹಿ ಹಾಕಿದರು.
ಈ ವೇಳೆ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, "ಸೆಮಿಕಂಡೆಕ್ಟರ್ ವಲಯಕ್ಕೆ ಇಂದು ಸುಮಾರು 10 ಲಕ್ಷ ಪ್ರತಿಭಾನಿತ್ವರ ಅಗತ್ಯವಿದೆ ಮತ್ತು ಇವರು ದೇಶದಲ್ಲೇ ಲಭ್ಯವಾಗಲಿದ್ದಾರೆ. ದೇಶದ 315 ವಿಶ್ವವಿದ್ಯಾಲಯಗಳು ಹಾಗೂ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಚಿಪ್ ವಿನ್ಯಾಸಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸೆಮಿಕಂಡೆಕ್ಟರ್ ಹಾಗೂ ಎಲೆಕ್ಟ್ರಾನಿಕ್ಸ್ ವಲಯಗಳಲ್ಲಿ ಸ್ವಾವಲಂಬನೆ ಸಾಧಿಸುವುದು ಭಾರತದ ಗುರಿಯಾಗಿದೆ. ದೇಶ ಇಂದು ಜಾಗತಿಕ ವಲಯದಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೂಪಿತವಾದ ವಿದೇಶಾಂಗ ನೀತಿಯಿಂದಾಗಿ ದೇಶದ ಗೌರವ ಹೆಚ್ಚಿದೆ" ಎಂದರು.
ಅಮೆರಿಕದ ಭಾರತೀಯ ರಾಯಭಾರಿ - ಸೆರ್ಗಿಯೋ ಗೊರ್ ಮಾತನಾಡಿ, "ರಕ್ಷಣಾ ಸಹಕಾರದಿಂದ ತಂತ್ರಜ್ಞಾನದವರೆಗೆ ಭಾರತ ಹಾಗೂ ಅಮೆರಿಕದ ನಡುವಿನ ಸಹಭಾಗಿತ್ವ ಅಪರಿಮಿತವಾಗಿದೆ. 21ನೇ ಶತಮಾನದಲ್ಲಿ ಆರ್ಥಿಕ ಮತ್ತು ತಾಂತ್ರಿಕ ಸ್ವಾವಲಂಬನೆ ಹಾಗೂ ಸುರಕ್ಷತೆಗೆ ಒಪ್ಪಂದ ಪೂರಕವಾಗಲಿದೆ" ಎಂದು ಹೇಳಿದರು.
ಪ್ಯಾಕ್ಸ್ ಸಿಲಿಕಾ ಎಂಬುದು 2025 ರ ಡಿಸೆಂಬರ್ನಲ್ಲಿ ಅಮೆರಿಕದಿಂದ ಪ್ರಾರಂಭಿಸಲಾದ ಒಂದು ಕಾರ್ಯತಂತ್ರದ ಮೈತ್ರಿಕೂಟ. ಎಐ ಮತ್ತು ಸೆಮಿಕಂಡಕ್ಟರ್ಗಳ ಸರಬರಾಜು ಸರಪಳಿಯನ್ನ ಸುರಕ್ಷಿತವಾಗಿ, ನಂಬಿಕಾರ್ಹ ರಾಷ್ಟ್ರಗಳ ನಡುವೆ ರಕ್ಷಿಸುವುದು ಮತ್ತು ಚೀನಾ ಸೇರಿದಂತೆ ಅನ್ಯ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಇದು ಪ್ರಮುಖ ಖನಿಜಗಳಾದ ಲಿಥಿಯಂ, ಕೋಬಾಲ್ಟ್, ರೇರ್ ಅರ್ಥ್ ಎಲಿಮೆಂಟ್ಸ್, ಸೆಮಿಕಂಡಕ್ಟರ್ ಉತ್ಪಾದನೆ, ಎಐ ತಂತ್ರಜ್ಞಾನ ಮತ್ತು ಶಕ್ತಿ ಸಂಪನ್ಮೂಲಗಳಿಂದ ಹಿಡಿದು ಸಂಪೂರ್ಣ ತಂತ್ರಜ್ಞಾನ ಸರಪಳಿಯನ್ನ ಒಳಗೊಂಡಿದೆ. ಪ್ರಸ್ತುತ ಅಮೆರಿಕ, ಜಪಾನ್, ಬ್ರಿಟನ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಇಸ್ರೇಲ್, ಸಿಂಗಾಪೂರ್, ಗ್ರೀಸ್, ಖತಾರ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ಸದಸ್ಯ ರಾಷ್ಟ್ರಗಳಾಗಿವೆ. ಇಂದು ಭಾರತ ಸಹಿ ಮಾಡುವ ಮೂಲಕ ಈ ಗುಂಪಿನ 11ನೇ ಸದಸ್ಯ ರಾಷ್ಟ್ರವಾಯಿತು.