ಗದಗ, ಫೆ. 21 (DaijiworldNews/AA): ಸಣ್ಣನೀರಾವರಿ ಇಲಾಖೆ ಕಾಮಗಾರಿ ಗುತ್ತಿಗೆ ನೀಡಲು ಗುತ್ತಿಗೆದಾರನಿಂದ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಶಿರಹಟ್ಟಿಯ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಫೆಬ್ರವರಿ 18ರಂದು ಗದಗ ಜಿಲ್ಲೆಯ ಗದಗ ತಾಲೂಕಿನ ಚಿಂಚಲಿ ಗ್ರಾಮದ ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರ ವಿಜಯರಾಜ ಎಸ್ ಪೂಜಾರ ಗದಗ ಲೋಕಾಯುಕ್ತ ಠಾಣೆಗೆ ಚಂದ್ರು ಲಮಾಣಿ ಅವರು ಲಂಚ ಬೇಡಿಕೆ ಇಟ್ಟ ಬಗ್ಗೆ ಹಾಗೂ ಧಮ್ಕಿ ಹಾಕಿದ್ದ ಬಗ್ಗೆ ದೂರು ನೀಡಿದ್ದರು. ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳನ್ನು ಮಾಡುತ್ತಿದ್ದು, 2025ರ ಜುಲೈ ತಿಂಗಳಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಲಕ್ಷ್ಮೀಶ್ವರ ತಾಲೂಕಿ ಸಂಕದಾಳ ಗ್ರಾಮದಲ್ಲಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಎರಡು ಕಾಮಗಾರಿಗಳನ್ನು ಮಾಡಲು ಆದೇಶ ಪಡೆದಿರುತ್ತಾರೆ.
ಈ ಕಾಮಗಾರಿಗಳನ್ನು ಮಾಡಲು ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಎಂಎಲ್ಎ ಚಂದ್ರು ಲಮಾಣಿ ತೊಂದರೆ ಮಾಡುತ್ತಿದ್ದು, ದೂರುದಾರರು ಅವರನ್ನು ಭೇಟಿಯಾದಾಗ ಶಾಸಕರು ಹಾಗೂ ಅವರ ಪಿ.ಎ ಮಂಜುನಾಥ್ ವಾಲ್ಮೀಕಿ ಮತ್ತು ಶಾಸಕರ ಸಂಬಂಧಿ ಗುರು ಲಮಾಣಿ ಗುತ್ತಿಗೆದಾರರಿಗೆ ಈ ಎರಡು ಕಾಮಗಾರಿಗಳನ್ನು ತಮಗೆ ತಿಳಿಸದೇ ಏಕೆ ಮಾಡುತ್ತಿದ್ದೀರಾ, ಈ ಟೆಂಡರ್ ರದ್ದು ಮಾಡಿಸುತ್ತೇವೆ. 12% ಕಮಿಷನ್ ಕೊಟ್ಟರೆ ಮಾತ್ರ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡುತ್ತೇವೆ. ಇಲ್ಲದಿದ್ದರೆ ರೌಡಿಗಳನ್ನು ಕಳುಹಿಸಿ ಬುದ್ಧಿ ಕಲಿಸುತ್ತೇವೆ ಎಂದು ಧಮ್ಕಿ ಹಾಕಿರುತ್ತಾರೆ. ಎರಡು ಕಾಮಗಾರಿಗಳಿಗೆ ಒಟ್ಟು 11 ಲಕ್ಷ ರೂ ಹಣವನ್ನು ಲಂಚವಾಗಿ ಕಮಿಷನ್ ರೂಪದಲ್ಲಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಈ ಬಗ್ಗೆ ಗುತ್ತಿಗೆದಾರ ವಿಜಯರಾಜ ಎಸ್ ಪೂಜಾರ ನೀಡಿದ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರಿನನ್ವಯ ಶನಿವಾರ ಮಧ್ಯಾಹ್ನ ದೂರುದಾರರಿಂದ ಶಾಸಕ ಚಂದ್ರು ಲಮಾಣಿ, ಅವರ ಪಿ.ಎ ಮಂಜುನಾಥ್ ವಾಲ್ಮೀಕಿ ಮತ್ತು ಶಾಸಕರ ಸಂಬಂಧಿ ಗುರು ಲಮಾಣಿ ಲಂಚದ ಮುಂಗಡ ಹಣವಾಗಿ 5 ಲಕ್ಷ ರೂ.ಗಳನ್ನು ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ದಸ್ತಗಿರಿ ಮಾಡಲಾಗಿರುತ್ತದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.