ಬೆಂಗಳೂರು, ಫೆ. 22 (DaijiworldNews/AA): ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರಿಗೆ ಮಾ.2ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಗುತ್ತಿಗೆದಾರನಿಂದ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಚಂದ್ರು ಲಮಾಣಿ ಅವರನ್ನು ಬಂಧಿಸಿ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಂತೋಷ್ ಗಜಾನನ ಭಟ್, ಬಿಜೆಪಿ ಶಾಸಕರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಕ್ಷೇತ್ರದ ಸುಂಕದಾಳ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚೆಕ್ ಡ್ಯಾಂ ನಿರ್ಮಾಣ ಹಾಗೂ ತಡೆಗೋಡೆ ಕಾಮಗಾರಿಗೆ 1 ಕೋಟಿ ರೂ. ಮಂಜೂರಾಗಿತ್ತು. ಗುತ್ತಿಗೆದಾರ ಕಾಮಗಾರಿ ಮುಂದುವರಿಸಬೇಕಾದರೆ 11 ಲಕ್ಷ ರೂ. ಕಮಿಷನ್ ನೀಡಬೇಕೆಂದು ಶಾಸಕ ಲಮಾಣಿ ಬೇಡಿಕೆ ಇಟ್ಟಿದ್ದರು. ಲಂಚದ ಮುಂಗಡ ಹಣವಾಗಿ 5 ಲಕ್ಷ ರೂ.ಗಳನ್ನು ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.