ಮೀರತ್, ಫೆ. 22 (DaijiworldNews/AA): ಈಗಾಗಲೇ ನೀವು ದೇಶದ ಮುಂದೆ ಬೆತ್ತಲಾಗಿದ್ದೀರಿ. ಹೀಗಿದ್ದರೂ ಮತ್ತೆ ನೀವು ಬಟ್ಟೆ ಬಿಚ್ಚಿದ್ದು ಯಾಕೆ? ಜಾಗತಿಕ ವೇದಿಕೆಯನ್ನು ಕೊಳಕು ಮತ್ತು ಬೆತ್ತಲೆ ರಾಜಕೀಯ ವೇದಿಕೆಯನ್ನಾಗಿ ಪರಿವರ್ತಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೆಹಲಿಯ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ನ ಅರೆಬೆತ್ತಲೆ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, "ದೇಶದೊಳಗೆ ಕೆಲವು ರಾಜಕೀಯ ಪಕ್ಷಗಳಿಗೆ ಭಾರತದ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ನಡೆದ ವಿಶ್ವದ ಅತಿದೊಡ್ಡ ಎಐ ಸಮ್ಮೇಳನಕ್ಕೆ 80 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ದೆಹಲಿಗೆ ಬಂದಿದ್ದರು. ಸುಮಾರು 20 ದೇಶಗಳ ರಾಷ್ಟ್ರಗಳ ಮುಖ್ಯಸ್ಥರು ಭಾರತಕ್ಕೆ ಆಗಮಿಸಿದ್ದರು. ಇಡೀ ದೇಶವು ಹೆಮ್ಮೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ ಕಾಂಗ್ರೆಸ್ ಮತ್ತು ಅದರ ಪರಿಸರ ವ್ಯವಸ್ಥೆ ಏನು ಮಾಡಿದೆ? ಜಾಗತಿಕ ಕಾರ್ಯಕ್ರಮವನ್ನು ಕಾಂಗ್ರೆಸ್ ತನ್ನ ಕೊಳಕು ಮತ್ತು ಬೆತ್ತಲೆ ರಾಜಕೀಯದ ವೇದಿಕೆಯನ್ನಾಗಿಸಿತು" ಎಂದು ಕಿಡಿಕಾರಿದ್ದಾರೆ.
"ಕಾಂಗ್ರೆಸ್ ನಾಯಕರು ವಿದೇಶಿ ಅತಿಥಿಗಳ ಮುಂದೆ ಬೆತ್ತಲೆಯಾಗಿ ಸ್ಥಳಕ್ಕೆ ತಲುಪಿದರು. ನಾನು ಕಾಂಗ್ರೆಸ್ನವರನ್ನು ಕೇಳುತ್ತೇನೆ. ನೀವು ಈಗಾಗಲೇ ಬೆತ್ತಲೆಯಾಗಿರುವುದು ದೇಶದ ಜನರಿಗೆ ತಿಳಿದಿದೆ. ಹೀಗಿದ್ದರೂ ನೀವು ನಿಮ್ಮ ಬಟ್ಟೆಗಳನ್ನು ಬಿಚ್ಚಿದ್ದು ಯಾಕೆ?" ಎಂದು ಪ್ರಶ್ನಿಸಿದರು.
"ಕಾಂಗ್ರೆಸ್ನ ಈ ನಡೆ ಅವರ ಸೈದ್ಧಾಂತಿಕ ದಿವಾಳಿತನವನ್ನು ಪ್ರತಿಬಿಂಬಿಸುತ್ತದೆ ಮತ್ತು ದೇಶದ ಅತ್ಯಂತ ಹಳೆಯ ಪಕ್ಷವು ಎಷ್ಟು ಬಡತನದಲ್ಲಿದೆ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಾಗದ ಸಮಯವಿತ್ತು. ಒಪ್ಪಂದ ಆಗದೇ ಇರಲು ಕಾರಣವೂ ಇತ್ತು. ಜಗತ್ತು ಕುಖ್ಯಾತ ಹಗರಣಗಳ ಸರ್ಕಾರವನ್ನು ಎದುರಿಸಲು ಹಿಂಜರಿಯುತ್ತಿತ್ತು. ಆದರೆ ಇಂದು ಅಭಿವೃದ್ಧಿ ಹೊಂದಿದ ದೇಶಗಳು ಭಾರತದೊಂದಿಗೆ ಸಂಪರ್ಕ ಸಾಧಿಸಲು ಉತ್ಸುಕವಾಗಿವೆ. 21 ನೇ ಶತಮಾನದ ಸವಾಲುಗಳಿಗೆ ಭಾರತ ಪರಿಹಾರಗಳನ್ನು ಒದಗಿಸಬಲ್ಲದು ಎಂದು ಜಗತ್ತು ಭಾವಿಸುತ್ತಿದೆ" ಎಂದು ವಾಗ್ದಾಳಿ ನಡೆಸಿದರು.