ನೆಲಮಂಗಲ, ಫೆ. 22 (DaijiworldNews/TA): ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಮಾಕಳಿ ಗ್ರಾಮದಲ್ಲಿ ಪರ್ಫ್ಯೂಮ್ ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡವು ಆತಂಕ ಸೃಷ್ಟಿಸಿದೆ. ಬೆಂಗಳೂರು – ನೆಲಮಂಗಲ ರಸ್ತೆಯಲ್ಲಿರುವ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಜ್ವಾಲೆಗಳು ಮುಗಿಲೆತ್ತರಕ್ಕೆ ಹಬ್ಬಿವೆ. ಭಾರೀ ಸ್ಫೋಟದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಭಯಭೀತರಾಗಿದ್ದಾರೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಗೋದಾಮಿನಲ್ಲಿದ್ದ ಸುಮಾರು 40 ಸಿಬ್ಬಂದಿ ಹೊರಗೆ ಓಡಿ ಪಾರಾಗಿದ್ದಾರೆ. ಅಗ್ನಿ ಪಕ್ಕದಲ್ಲಿದ್ದ ಏಸಿ ಗೋದಾಮಿಗೂ ವ್ಯಾಪಿಸಿ, ಅಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ಸುಟ್ಟು ಕರಕಲಾಗಿವೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ, 10 ಅಗ್ನಿಶಾಮಕ ವಾಹನಗಳ ಸಹಾಯದಿಂದ ಹಲವು ಗಂಟೆಗಳ ಹರಸಾಹಸದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಮಾಕಳಿ ಗ್ರಾಮದ ಲೋಕೇಶ್ ಅವರಿಗೆ ಸೇರಿದ ಈ ಗೋದಾಮುಗಳಲ್ಲಿ ಏಸಿ, ಫ್ರಿಡ್ಜ್, ಪರ್ಫ್ಯೂಮ್ ಹಾಗೂ ಪೆಡಿಗ್ರಿ ವಸ್ತುಗಳನ್ನು ಸಂಗ್ರಹಿಸಿ ಮೂರು ಖಾಸಗಿ ಕಂಪನಿಗಳಿಗೆ ಬಾಡಿಗೆಗೆ ನೀಡಲಾಗಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ಮೊದಲು ಪರ್ಫ್ಯೂಮ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಗ್ಯಾಸ್ ಸ್ಫೋಟ ಸಂಭವಿಸಿ ಪಕ್ಕದ ಗೋದಾಮಿಗೂ ಅಗ್ನಿ ವ್ಯಾಪಿಸಿದೆ ಎನ್ನಲಾಗಿದೆ. ಅವಘಡದಲ್ಲಿ ಐವರು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋದಾಮಿನಲ್ಲಿ ಸಂಗ್ರಹಿಸಿದ್ದ 20 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವುದಾಗಿ ಅಂದಾಜಿಸಲಾಗಿದೆ. ಘಟನೆಯ ನಿಖರ ಕಾರಣ ತಿಳಿಯಲು ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.