ನವದೆಹಲಿ, ಫೆ. 23 (DaijiworldNews/TA): ಅತ್ತಿಂದಿತ್ತ ಓಡಾಡೋ ಮುದ್ದಾದ ಮರಿ ಕಪಿ, ಆತನ ಕೈಯಲ್ಲೊಂದು ಕ್ಯೂಟ್ ಗೊಂಬೆ. ಭಾವನೆಯಲ್ಲೇ ಬೆಸೆದ ಜೀವಂತ ಮಂಗನ ಜೊತೆಗಿನ ನಿರ್ಜೀವ ಬೊಂಬೆಯ ಸಂಬಂಧ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗ್ತಿರೋ ಹಾರ್ಟ್ ಟಚ್ಚಿಂಗ್ ಕಥೆ ಇದು.

ಇತ್ತೀಚೆಗೆ ಪೆಂಗ್ವಿನ್ ಕಥೆಯೊಂದು ಅದೆಷ್ಟೋ ಮನಸ್ಸುಗಳಿಗೆ ಹತ್ತಿರವಾಗಿ ಜಗತ್ತಿನಾದ್ಯಂತ ವೈರಲ್ ಆಗ್ತಾ ಇತ್ತು. ಇದೀಗ ಇದೇ ಸರದಿಯಲ್ಲಿದೆ ಈ ಮಂಗನ ಮಮತೆಯ ಕಥೆ. ಹೌದು ಸ್ವಲ್ಪ ಸೋಶಿಯಲ್ ಮೀಡಿಯಾದತ್ತ ಕಣ್ಣಾಡಿಸಿದರೂ ಸಾಕು ಸ್ಕ್ರಾಲ್ ಮಾಡಿದರೆ ಆ ಒಂದು ಪುಟ್ಟ ಮರಿ ಮಂಗನ ವಿಡಿಯೋಗಳು ಕಣ್ತುಂಬಿಕೊಳ್ಳುತ್ತವೆ. ಜಪಾನ್ನ ಇಚಿಕಾವಾ ನಗರದ ಇಚಿಕಾವಾ ಸಿಟಿ ಮೃಗಾಲಯದಲ್ಲಿ ವಾಸಿಸುತ್ತಿರುವ ಈ ಪುಟ್ಟ ಮಂಗ ಇದೀಗ ಜಗತ್ತಿನಾದ್ಯಂತ ಹೃದಯ ಗೆದ್ದಿದೆ.
ಹಾಗಿದ್ರೆ ಯಾರು ಈ ‘ಪಂಚ್’? : ಜುಲೈ 2025ರಲ್ಲಿ ಜನಿಸಿದ ‘ಪಂಚ್’ (ಜಪಾನೀಸ್ನಲ್ಲಿ ‘ಪಂಚಿ-ಕುನ್’) ಮಕಾಕ್ ತಳಿಗೆ ಸೇರಿದ ಮರಿ ಮಂಗ. ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿಯಿಂದ ದೂರಾದ ಪಂಚ್ಗೆ ಕುಟುಂಬದ ಬೆಂಬಲವೇ ಇರಲಿಲ್ಲ. ತಾಯಿ ನಿರ್ಲಕ್ಷ್ಯದಿಂದ ಮರಿ ಮಂಗವನ್ನು ಬಿಟ್ಟುಹೋದ ಬಳಿಕ, ಮೃಗಾಲಯದ ಸಿಬ್ಬಂದಿಯೇ ಪಂಚ್ನ ಆರೈಕೆಯನ್ನು ಹೊತ್ತುಕೊಂಡರು. ಮೃಗಾಲಯದ ಇತರ ಮಂಗಗಳು ಪಂಚ್ನನ್ನು ತಮ್ಮ ಗುಂಪಿನಲ್ಲಿ ಸ್ವೀಕರಿಸಲಿಲ್ಲ. ಏಕಾಂಗಿತನದಿಂದ ಬಳಲುತ್ತಿದ್ದ ಈ ಮರಿ ಮಂಗನಿಗೆ ಆಸರೆಯಾಗಲೆಂದು ಪಾಲಕರು ಕೆಲವೊಂದು ಬೊಂಬೆಗಳನ್ನು ಆತನ ಮುಂದೆ ತಂದಿಡ್ತಾರೆ. ಇವೆಲ್ಲವನ್ನು ನೋಡಿದ ಆತ ಆರಿಸಿ ಕೊಂಡದ್ದು ತಾಯಿಯನ್ನೇ ಹೋಲೋ ಒಂದು ಕಿತ್ತಳೆ ಬಣ್ಣದ ಒರಾಂಗುಟನ್ ಬೊಂಬೆಯನ್ನು. ಆ ಕ್ಷಣದಿಂದಲೇ ಆ ಮೃದುವಾದ ಬೊಂಬೆ ಪಂಚ್ಗೆ ತಾಯಿಯಂತಾಯಿತು. ಹೋದಲ್ಲೆಲ್ಲಾ ಅದನ್ನೇ ಹೊತ್ತುಕೊಂಡು ಹೋಗುವ ಪಂಚ್, ಅದರಲ್ಲಿ ನೆಮ್ಮದಿ, ಪ್ರೀತಿ ಮತ್ತು ಭದ್ರತೆಯನ್ನು ಕಂಡುಕೊಂಡಿತು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಲಕ್ಷಾಂತರ ಜನರ ಮನಸ್ಸು ಗೆದ್ದಿವೆ.
ಇತರ ಮಂಗಗಳ ಜೊತೆ ಬೆರೆಯಲು ಪಂಚ್ ಹಲವು ಬಾರಿ ಪ್ರಯತ್ನಿಸಿದರೂ, ಕೆಲವೊಮ್ಮೆ ಅವನನ್ನು ಗದರಿಸುವ ಘಟನೆಗಳು ನಡೆದಿವೆ. ಇದನ್ನು ನೋಡಿ ಹಲವರು ಬೇಸರ ವ್ಯಕ್ತಪಡಿಸಿದರೂ, ಮೃಗಾಲಯದ ಸಿಬ್ಬಂದಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
“ಪಂಚ್ನನ್ನು ಇತರ ಜಪಾನಿ ಮಂಗಗಳ ಗುಂಪಿಗೆ ಸೇರಿಸುವಾಗ ಇಂತಹ ಸವಾಲುಗಳು ಎದುರಾಗುತ್ತವೆ ಎಂದು ನಾವು ಮೊದಲೇ ಊಹಿಸಿದ್ದೆವು. ಇತರ ಮಂಗಗಳು ಅವನನ್ನು ಗದರಿಸಿದ್ದರೂ, ಯಾವುದೇ ಗಂಭೀರ ಹಲ್ಲೆ ನಡೆದಿಲ್ಲ. ಗದರಿಸಲ್ಪಟ್ಟಾಗಲೂ ಪಂಚ್ ಅದ್ಭುತವಾದ ಮಾನಸಿಕ ಸ್ಥೈರ್ಯ ತೋರಿಸುತ್ತಿದ್ದಾನೆ. ಅವನ ಮೇಲೆ ಮರುಕಪಡುವುದಕ್ಕಿಂತ, ಗುಂಪಿನೊಂದಿಗೆ ಬೆರೆಯಲು ಅವನು ಮಾಡುತ್ತಿರುವ ಪ್ರಯತ್ನಕ್ಕೆ ಬೆಂಬಲ ನೀಡಿ,” ಎಂದು ಮೃಗಾಲಯದ ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಂಗಲ್ ಲೈಫ್ಗಳ ಮನಸ್ಸನ್ನು ಗೆದ್ದ ಪಂಚ್ ಮತ್ತು ಅವನ ಬೊಂಬೆಯ ಕುರಿತಾಗಿ ಅನೇಕ ಕಾಮೆಂಟ್ಗಳು ಹರಿದಾಡುತ್ತಿವೆ. “ನಾನು ಮತ್ತು ನನ್ನ ಜೀವನದ ಏಕೈಕ ಆಸರೆ” ಎಂಬ ಕ್ಯಾಪ್ಷನ್ಗಳೊಂದಿಗೆ ಹಲವರು ಈ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪಂಚ್ನ ಕಷ್ಟಕರ ಆರಂಭ ಮತ್ತು ಅವನ ಧೈರ್ಯ ಹಲವರನ್ನು ತಮ್ಮ ಜೀವನದ ಅನುಭವಗಳೊಂದಿಗೆ ಹೋಲಿಕೆ ಮಾಡಿಕೊಳ್ಳುವಂತೆ ಮಾಡಿದೆ. ತಾಯಿಯ ಪ್ರೀತಿಯಿಂದ ವಂಚಿತನಾದರೂ, ಒಂದು ಸಣ್ಣ ಬೊಂಬೆಯಲ್ಲೇ ಪ್ರೀತಿಯ ವಿಶ್ವ ಕಂಡುಕೊಂಡ ಪಂಚ್ ಈಗ ಧೈರ್ಯ ಮತ್ತು ಆಸರೆಯ ಸಂಕೇತವಾಗಿ ಪರಿಣಮಿಸಿದ್ದಾನೆ.
ಒಂದೊಮ್ಮ ಪೆಂಗ್ವಿನ್ ಇದೀಗ ಮರಿ ವಾನರ. ಎರಡೂ ವೈರಲ್ ಆಗಿದ್ದು ಅದೊಂದೇ ವಿಚಾರಕ್ಕೆ. ಅದುವೇ ಏಕಾಂಗಿತನ, ಒಂಟಿತನದ ಛಾಯೆ. ಅಂದು ಮಹಾನ್ ವ್ಯಕ್ತಿಯೊಬ್ಬರು ಹೇಳಿದ್ರು ಮನುಷ್ಯ ಸಂಘಜೀವಿ ಎಂದು ಆದ್ರೆ ಇತ್ತೀಚೆಗೆ ಎಲ್ಲರೂ ಏಕಾಂತವನ್ನು ಬಯಸುತ್ತಿರೋದಾದ್ರೂ ಯಾಕೆ ಸಂಬಂಧದಲ್ಲಿ ನಿರಾಸೆ ಆಗ್ತಿರೋದ್ಯಾಕೆ? ಪ್ರಾಣಿ ಪಕ್ಷಿಗಳ ಒಂಟಿತನದಲ್ಲಿ ತನ್ನ ಜೀವನದ ಛಾಯೆಯನ್ನು ಕಂಡು ಮನುಷ್ಯ ಮರುಗುತ್ತಿರೋದ್ಯಾಕೆ? ಅದೇನೇ ಇರಲಿ ಅದೆಷ್ಟೇ ವಿಜ್ಞಾನ ವಿಕಸನವಾದ್ರೂ ಅದೆಷ್ಟೇ ಅಭಿವೃದ್ದಿ ಕಂಡರೂ ನಮ್ಮ ಪುಣ್ಯಭೂಮಿಯಲ್ಲಿ ಎಂದೂ ಬದಲಾಗದೇ ಇರುವುದೇ ಮನುಷ್ಯನ ಅಂತರಾಳದ ಭಾವನೆ.
-ತಾರಾ ನವೀನ್ಶೆಟ್ಟಿ ವರ್ಕಾಡಿ