ಬೆಂಗಳೂರು, ಫೆ. 23 (DaijiworldNews/TA): ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇರುವ ನಡುವೆಯೇ, ಹೈಕೋರ್ಟ್ನಿಂದ ಸಣ್ಣ ಮಟ್ಟಿನ ರಿಲೀಫ್ ಪಡೆದಿದ್ದಾರೆ. ಗನ್ ಲೈಸೆನ್ಸ್ ಅಮಾನತು ಕ್ರಮಕ್ಕೆ ನ್ಯಾಯಾಲಯ ಇದೀಗ ಮಧ್ಯಂತರ ತಡೆ ನೀಡಿದೆ.

2024ರಲ್ಲಿ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ದೊರೆತಿತ್ತು. ಆದರೆ ಬಳಿಕ ಸುಪ್ರೀಂಕೋರ್ಟ್ ಜಾಮೀನನ್ನು ರದ್ದುಪಡಿಸಿತ್ತು. ಜಾಮೀನು ಸಿಕ್ಕ ಬಳಿಕ ದರ್ಶನ್ ಅವರ ಗನ್ ಲೈಸೆನ್ಸ್ ಅನ್ನು ಪೊಲೀಸರು ಅಮಾನತುಗೊಳಿಸಿದ್ದರು. ಗನ್ ಬಳಸಿ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇರುವುದಾಗಿ ಪೊಲೀಸರು ಕಾರಣ ನೀಡಿದ್ದರು. ಈ ಕ್ರಮವನ್ನು ಪ್ರಶ್ನಿಸಿ ದರ್ಶನ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ದರ್ಶನ್ ಪರ ವಕೀಲ ಎಸ್. ಸುನೀಲ್ ಕುಮಾರ್ ವಾದಿಸಿದಂತೆ, “2008ರಿಂದಲೂ ದರ್ಶನ್ ಕಾನೂನುಬದ್ಧ ಲೈಸೆನ್ಸ್ ಹೊಂದಿದ್ದಾರೆ. ಜಾಮೀನು ರದ್ದಾದ ಬಳಿಕ ಗನ್ನ್ನು ಸರಂಡರ್ ಮಾಡಲಾಗಿದೆ. ಕೇವಲ ಹೆಸರಿನ ಆಧಾರದಲ್ಲಿ ಲೈಸೆನ್ಸ್ ಅಮಾನತು ಮಾಡಲಾಗಿದೆ,” ಎಂದು ವಾದಿಸಿದರು. ಇದಕ್ಕೆ ಹೈಕೋರ್ಟ್, “ಹೆಸರಿನ ಕಾರಣಕ್ಕಲ್ಲ, ಆರೋಪ ಇರುವ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿದೆ,” ಎಂದು ಅಭಿಪ್ರಾಯಪಟ್ಟಿತು. ಆದರೂ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಗನ್ ಲೈಸೆನ್ಸ್ ಅಮಾನತು ಕ್ರಮಕ್ಕೆ ಮಾರ್ಚ್ 6ರವರೆಗೆ ಮಧ್ಯಂತರ ತಡೆ ನೀಡಿದೆ.
ಪ್ರಸ್ತುತ ದರ್ಶನ್ ಜೈಲಿನಲ್ಲೇ ಇದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿದಿದ್ದು, ತಕ್ಷಣ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇದಾಗ್ಯೂ, ಹೈಕೋರ್ಟ್ ನೀಡಿದ ಮಧ್ಯಂತರ ತಡೆ ಆದೇಶ ದರ್ಶನ್ ಪರವಾಗಿ ಸಣ್ಣ ಮಟ್ಟಿನ ರಿಲೀಫ್ ಆಗಿದೆ. ಅವರ ಅಭಿಮಾನಿಗಳು ಮುಂದಿನ ಬೆಳವಣಿಗೆಗಳತ್ತ ಕಾತರದಿಂದ ಕಾಯುತ್ತಿದ್ದಾರೆ.