ಅಮರಾವತಿ, ಫೆ. 23 (DaijiworldNews/AA): ಪ್ರಕರಣವೊಂದರಲ್ಲಿ ಕಸ್ಟಡಿಯಲ್ಲಿದ್ದ ಸಂಸದರೊಬ್ಬರಿಗೆ ಥರ್ಡ್ ಡಿಗ್ರಿ ಹಲ್ಲೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಸುನಿಲ್ ನಾಯಕ್ ಅವರನ್ನು ಪಾಟ್ನಾದಲ್ಲಿ ಬಂಧಿಸಲಾಗಿದೆ.

ಸುನೀಲ್ ಅವರನ್ನು ಪಾಟ್ನಾದ ಅವರ ನಿವಾಸದಲ್ಲಿ ಆಂಧ್ರ ಪ್ರದೇಶ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಾಡಿ ವಾರಂಟ್ ಮೇರೆಗೆ ಬಿಹಾರದಿಂದ ಆಂಧ್ರ ಪ್ರದೇಶದ ಗುಂಟೂರಿಗೆ ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಸರ್ಕಾರದ ಅವಧಿಯಲ್ಲಿ ಸಂಸದರಾಗಿದ್ದ ಮತ್ತು ಪ್ರಸ್ತುತ ಆಂಧ್ರ ವಿಧಾನಸಭೆಯ ಉಪ ಸ್ಪೀಕರ್ ಆಗಿರುವ ರಘುರಾಮಕೃಷ್ಣಂ ರಾಜು ಅವರು ಪ್ರಕರಣವೊಂದರ ಸಂಬಂಧ ಕಸ್ಟಡಿಯಲ್ಲಿದ್ದರು. ಈ ವೇಳೆ ಥರ್ಡ್ ಡಿಗ್ರಿ ಟ್ರಿಟ್ಮೆಂಟ್ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಡಿಪಿ ಸರ್ಕಾರ ತನಿಖೆ ನಡೆಸುವಂತೆ ಆದೇಶ ಹೊರಡಿಸಿದೆ.
ಬಿಹಾರ ಕೇಡರ್ನಲ್ಲಿ ಪ್ರಸ್ತುತ ಐಜಿಯಾಗಿ ಸೇವೆ ಸಲ್ಲಿಸುತ್ತಿರುವ ಸುನಿಲ್ ನಾಯಕ್ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಹಾಜರಾಗುವಂತೆ ಈ ಹಿಂದೆ ಆಂಧ್ರ ಪೊಲೀಸರು ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರು. ಆದರೆ ಸುನಿಲ್ ಕುಮಾರ್ ಜಾರಿ ಮಾಡಿದ ಯಾವುದೇ ನೋಟಿಸ್ಗೂ ಪ್ರತಿಕ್ರಿಯಿಸದ ಹಿನ್ನೆಲೆ ಪಾಟ್ನಾಗೆ ತೆರಳಿದ್ದ ಆಂಧ್ರ ಪ್ರದೇಶ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಾಡಿ ವಾರಂಟ್ ಮೇಲೆ ಕರೆ ತರುತ್ತಿದ್ದಾರೆ ಎಂದು ವರದಿಯಾಗಿದೆ.