ನವದೆಹಲಿ, ಜು31(Daijiworld News/SS): ಎನ್.ಡಿ.ಎ ಸರ್ಕಾರದ ಮಹಾತ್ವಾಕಾಂಕ್ಷಿ ಸಂಕಲ್ಪಗಳಲ್ಲೊಂದಾಗಿದ್ದ 'ತ್ರಿವಳಿ ತಲಾಖ್ ಮಸೂದೆ'ಗೆ ಕೊನೆಗೂ ರಾಜ್ಯ ಸಭೆಯಲ್ಲೂ ಅಂಗೀಕಾರ ದೊರಕಿದೆ.
ಎರಡು ಬಾರಿ ಲೋಕಸಭೆಯಲ್ಲಿ ಮಂಡನೆಯಾದರೂ ರಾಜ್ಯ ಸಭೆಯಲ್ಲಿ ಮಂಡನೆಯಾಗದೆ ಉಳಿದಿದ್ದ ಈ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ರಾಜ್ಯ ಸಭೆಯ ಮುಂದಿಟ್ಟಿದ್ದರು. ಸುದೀರ್ಘ ಚರ್ಚೆಯ ನಂತರ ತ್ರಿವಳಿ ತಲಾಖ್ ಮಸೂದೆಯನ್ನು ಅಂತಿಮವಾಗಿ ಮತಕ್ಕೆ ಹಾಕಿದಾಗ ಮಸೂದೆಯ ಪರ 99 ಹಾಗೂ ಮತ್ತು ವಿರುದ್ಧವಾಗಿ 84 ಮತಗಳು ಬಿದ್ದವು. ಈ ಮೂಲಕ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆ ಕೊನೆಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಂತಾಗಿದೆ.
ತ್ರಿವಳಿ ತಲಾಖ್ ಮಸೂದೆ ಈ ಹಿಂದೆ ಎರಡು ಬಾರಿ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ಈ ಹಿಂದೆ ಎರಡು ಬಾರಿ ವಿಧೇಯಕ ಅಂಗೀಕಾರ ಆಗಿರಲಿಲ್ಲ. ಈಗಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ. ಆದರೆ ಜೆಡಿಯು ಮತ್ತು ಎಐಎಡಿಎಂಕೆ ಸಭಾತ್ಯಾಗ ಮಾಡಿದ್ದರಿಂದ ಮಸೂದೆ ಅಂಗೀಕಾರವಾಗಿದೆ.
ಈ ಮಸೂದೆ ಪ್ರಕಾರ, ತ್ರಿವಳಿ ತಲಾಖ್ ನೀಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಈ ಕಾನೂನಿನಲ್ಲಿ ಅವಕಾಶವಿದೆ.