ಮೈಸೂರು, ಜು31(Daijiworld News/SS): ಸರ್ಕಾರ ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು ಮತ್ತು ದೇಶದ ಅಭಿವೃದ್ಧಿಗೆ ಆದ್ಯತೆ ಕೊಡಬೇಕು ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ವಿಷಯಗಳನ್ನು ಹೊರತುಪಡಿಸಿ ಇಂದು ದೇಶ ಬೇರೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಕೊಡಬೇಕು ಮತ್ತು ದೇಶದ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಪ್ರಧಾನಿಯವರ ಮೇಲೆ ಒತ್ತಾಯ ಹೇರಲಿದ್ದೇವೆ ಎಂದು ನುಡಿದರು.
ಜೈನರು, ಬುದ್ಧರು ಅಥವಾ ಸಿಖ್ಖರಾಗಿರಲಿ ಎಲ್ಲರೂ ಹಿಂದೂ ಧರ್ಮಕ್ಕೆ ಸೇರಿದವರು. ಯಾಕೆಂದರೆ ಭರತ ಖಂಡದ ಹಿಂದಿನ ಸನ್ಯಾಸಿಗಳು, ಋಷಿಗಳು ಹಿಂದೂ ಧರ್ಮದಿಂದಲೇ ಬಂದವರಾಗಿದ್ದಾರೆ. ನಂತರ ದೇಶದಲ್ಲಿ ಬ್ರಿಟಿಷರ ಆಳ್ವಿಕೆ ನಂತರ ಹಿಂದೂ ಧರ್ಮ ಒಡೆದು ಹೋಯಿತು ಎಂದು ಪೇಜಾವರ ಶ್ರೀಗಳು ಪ್ರತಿಪಾದಿಸಿದರು.
ದೇಶದೆಲ್ಲೆಡೆ ಗೋಹತ್ಯೆ ಸಂಪೂರ್ಣ ನಿಷೇಧ, ರಾಮ ಮಂದಿರ ನಿರ್ಮಾಣ ಮತ್ತು ಗಂಗಾ ನದಿ ಸ್ವಚ್ಛತಾ ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳುವಂತೆ ಒತ್ತಾಯಿಸಿ ಅರ್ಚಕರ ನಿಯೋಗದೊಂದಿಗೆ ಶೀಘ್ರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಆಗಸ್ಟ್ 14ರಂದು ಚಾತುರ್ಮಾಸ್ಯ ವೃತ ಮುಗಿದ ನಂತರ ಪ್ರಧಾನಿಯವರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.