ಶ್ರೀನಗರ, ಜು31(Daijiworld News/SS): ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ಮಸೂದೆಗೆ ಅಂಗೀಕಾರ ಪಡೆದಿದ್ದು ಏಕೆ ಎಂಬುದು ತಿಳಿಯುತ್ತಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಜು.30ರಂದು ಪ್ರತಿಪಕ್ಷಗಳ ಕೆಲ ಸದಸ್ಯರ ಕಲಾಪ ಬಹಿಷ್ಕಾರ ಹಾಗೂ ಗೈರಿನ ಲಾಭ ಪಡೆದ ಬಿಜೆಪಿ 99:84 ಮತದಲ್ಲಿ ಮುಸ್ಲಿಂ ಮಹಿಳಾ ಹಕ್ಕುಗಳ ಸುರಕ್ಷತೆ ವಿಧೇಯಕಕ್ಕೆ (ದಿಢೀರ್ ತ್ರಿವಳಿ ತಲಾಕ್ ನಿಷೇಧ) ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಮುಸ್ಲಿಂ ಮಹಿಳೆಯರ ನಾಲ್ಕೂವರೆ ದಶಕಗಳ ಹೋರಾಟ ಹಾಗೂ ಬಿಜೆಪಿ ಸರ್ಕಾರದ 3 ವರ್ಷಗಳ ನಿರಂತರ ಪ್ರಯತ್ನದ ನಂತರ ತ್ರಿವಳಿ ತಲಾಕ್ ಮಸೂದೆಗೆ ಸಂಸತ್ನ ಎರಡೂ ಸದನದಲ್ಲಿ ಅಂಗೀಕಾರ ದೊರೆತಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರ ಇಷ್ಟು ತುರ್ತಾಗಿ ಮಸೂದೆ ಅಂಗೀಕರಿಸಿದ್ದು ಏಕೆ ಎಂದು ಕಿಡಿ ಕಾರಿದ್ದಾರೆ.
ಈ ಕುರಿತು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂ ಕೋರ್ಟ್ ಈಗಾಗಲೇ ತ್ರಿವಳಿ ತಲಾಕ್ ಅನ್ನು ಕಾನೂನು ಬಾಹಿರ ಎಂದು ಆದೇಶ ನೀಡಿದೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ಮಸೂದೆಗೆ ಅಂಗೀಕಾರ ಪಡೆದಿದ್ದು ಏಕೆ ಎಂಬುದು ತಿಳಿಯುತ್ತಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಈ ಮಸೂದೆಗೆ ಹೆಚ್ಚಿನ ಒತ್ತು ನೀಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.