ಬೆಂಗಳೂರು, ಜು31(Daijiworld News/SS): ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಆತ್ಮಹತ್ಯೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಲೇಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಉದ್ಯಮಿ ವಿ.ಜಿ.ಸಿದ್ಧಾರ್ಥ್ ಅವರ ಸಾವು ಎಷ್ಟು ಎಷ್ಟು ದಾರುಣವೋ, ಅದರ ಹಿನ್ನೆಲೆ ಅಷ್ಟೇ ನಿಗೂಢವಾದುದು. ಅವರನ್ನು ಇಂತಹದ್ದೊಂದು ದುರಂತಕ್ಕೆ ತಳ್ಳಿದ ಕಾರಣಗಳು ಮತ್ತು ಅದರ ಹಿಂದಿನ ಕಾಣದ ಕೈಗಳ ಬಗ್ಗೆ ಸಮಗ್ರ ತನಿಖೆಯಾದರೆ ಮಾತ್ರ ಅವರಿಗೆ ನಾವು ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ವಿ.ಜಿ.ಸಿದ್ಧಾರ್ಥ್ ಅವರು ಕೊನೆಯಲ್ಲಿ ಬರೆದಿರುವ ಪತ್ರದಲ್ಲಿನ ವಿವರಗಳ, ಅವರ ಸಾವಿಗೆ ಐಟಿ ಇಲಾಖೆಯ ಕಿರುಕುಳ ಕಾರಣವಾಗಿರಬಹುದೆಂಬ ಸಂಶಯ ಹುಟ್ಟಿಸುವಂತಿದೆ. ಕಳೆದ ಐದು ವರ್ಷಗಳಲ್ಲಿ ಐಟಿ ಇಲಾಖೆಯ ಕಾರ್ಯ ನಿರ್ವಹಣೆ ಈ ಸಂಶಯವನ್ನು ಇನ್ನಷ್ಟು ಪುಷ್ಠೀಕರಿಸುತ್ತದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಲೇಬೇಕು ಎಂದು ಟ್ವಿಟ್ಟರ್'ನಲ್ಲಿ ಒತ್ತಾಯಿಸಿದ್ದಾರೆ.