ಬೆಂಗಳೂರು, ಜು31(Daijiworld News/SS): ಉದ್ಯಮಿ ಸಿದ್ಧಾರ್ಥ್ ನಮ್ಮನ್ನಗಲಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧಾರ್ಥ್ ರಾಜ್ಯದ ಆಸ್ತಿಯಾಗಿದ್ದರು. ರಾಜ್ಯದಲ್ಲಿ ಬೃಹತ್ ಉದ್ಯಮ ಸೃಷ್ಟಿಸಿ ಸಾವಿರಾರು ಜನರಿಗೆ ಅದರಲ್ಲೂ ಕನ್ನಡಿಗರಿಗೆ ಉದ್ಯಮ ನೀಡಿ, ಸರಳತೆಯಿಂದ ಎಲ್ಲರ ವಿಶ್ವಾಸ ಗಳಿಸಿದ್ದರು. ಇಂದು ಅವರು ಇಲ್ಲ ಎನ್ನುವ ಸುದ್ದಿಯನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದಿದ್ದಾರೆ.
ಸಿದ್ದಾರ್ಥ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉದ್ಯಮವನ್ನು ಮುನ್ನಡೆಸುತ್ತಿದ್ದರು. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಯಶಸ್ವಿ ಉದ್ಯಮಿಯಾಗಿದ್ದರು. ಈ ಮೂಲಕ ಉತ್ತಮ ಜೀವನ ನಡೆಸುತ್ತಿದ್ದರು. ಆದರೆ ಈಗ ಅವರು ನಮ್ಮನ್ನಗಲಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ಅನಿವಾರ್ಯವಾಗಿ ನಂಬಲೇಬೇಕಾಗಿದೆ ಎಂದು ಹೇಳಿದ್ದಾರೆ.
ಭಗವಂತ ಅವರ ಎಲ್ಲಾ ಸ್ನೇಹಿತರು, ಅಭಿಮಾನಿಗಳು, ಸಿಬ್ಬಂದಿ, ಕುಟುಂಬ ಸದಸ್ಯರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಆದಾಯ ತೆರಿಗೆ ಬಹಳ ತರಾತುರಿಯಲ್ಲಿ ಸ್ಪಷ್ಟನೆ ನೀಡಿದೆ. ಅವರು ಈಗ ಏನು ಬೇಕಾದರು ಮಾತನಾಡಬಹುದು. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ. ಈಗ ನಾನು ಇಲಾಖೆಯ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.