ಬೆಂಗಳೂರು, ಜು 31(Daijiworld News/MSP): ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ್ ಅವರ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಕಾಫಿ ಡೇ ಎಂಟರ್ಪ್ರೈಸಸ್ ನ ನೂತನ ಹಂಗಾಮಿ ಅಧ್ಯಕ್ಷರಾಗಿ ಎಸ್.ವಿ.ರಂಗನಾಥ್ ಅವರನ್ನು ಸಂಸ್ಥೆಯ ನಿರ್ದೇಶಕ ಮಂಡಳಿ ನೇಮಿಸಿದೆ. ಇದರೊಂದಿಗೆ ಕಂಪನಿಯು ನಿತಿನ್ ಬಾಗ್ಮನೆ ಅವರನ್ನು ಸಹ ಮಧ್ಯಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಓಓ) ನೇಮಕ ಮಾಡಿದೆ.
ಈ ಹಿಂದೆ ಸಿಇಓ ಅವರಿಗಿದ್ದ ಜವಾಬ್ದಾರಿಯನ್ನು ಇನ್ನು ಮುಂದೆ ಎಸ್ವಿ ರಂಗನಾಥ್ (ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕ), ನಿತಿನ್ ಬಾಗ್ಮನೆ (ಸಿಒಒ) ಮತ್ತು ಆರ್ ರಾಮ್ ಮೋಹನ್ ಅವರನ್ನೊಳಗೊಂಡ ಕಾರ್ಯಕಾರಿ ಸಮಿತಿಯು ನಿಭಾಯಿಸಲಿದೆ ಎಂದು ಸಂಸ್ಥೆ ತಿಳಿಸಿದೆ. ನಿರ್ದೇಶಕರ ಮಂಡಳಿಯ ಮುಂದಿನ ಸಭೆ ಆಗಸ್ಟ್ 8ರಂದು ನಡೆಯಲಿದೆ.
ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಅವರು ಸೋಮವಾರ ಸಂಜೆ 7 ಗಂಟೆಯಿಂದ ನಾಪತ್ತೆಯಾಗಿದ್ದರು. ಬೆಂಗಳೂರಿನಿಂದ ಸಕಲೇಶಪುರಕ್ಕೆ ಕಾರಿನಲ್ಲಿ ಚಾಲಕನ ಜತೆ ಹೊರಟು, ಅಲ್ಲಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ ಅವರು, ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಉಳ್ಳಾಲದ ನೇತ್ರಾವತಿ ಸೇತುವೆಯಿಂದ ಕೆಳಗೆ ಧುಮುಕಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಮೃತದೇಹ ಬುಧವಾರ ಪತ್ತೆಯಾಗಿತ್ತು.