ಬೆಂಗಳೂರು, ಜು31(Daijiworld News/SS): ಉದ್ಯಮಿ ಸಿದ್ಧಾರ್ಥ್ ಸಾವಿನ ಬೆನ್ನಲ್ಲೇ, ಅವರ ಸ್ಮರಣಾರ್ಥ ಇಂದು ದೇಶದ ಎಲ್ಲ ಕಾಫಿ ಡೇ ಔಟ್ ಲೆಟ್'ಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸಿದ್ಧಾರ್ಥ್ ಸಾವಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ಕಾಫಿ ಉದ್ಯಮವನ್ನು ಸ್ಥಗಿತಗೊಳಿಸಲಾಗಿದೆ. ದೇಶಾದ್ಯಂತ ಇರುವ ಎಲ್ಲ ಕಾಫಿ ಡೇ ಔಟ್ ಲೆಟ್ ಗಳ ಸೇವೆಯನ್ನು ಸ್ಥಗಿತಗೊಳಿಸಿ ಕೆಲಸಗಾರರಿಗೆ ರಜೆ ಘೋಷಣೆ ಮಾಡಲಾಗಿದೆ. ಸಂಸ್ಛೆಯ ಮೂಲಗಳ ಪ್ರಕಾರ ಇಂದು 240 ನಗರಗಳಲ್ಲಿರುವ ಸುಮಾರು 1,750 ಔಟ್ ಲೆಟ್'ಗಳನ್ನು ಮುಚ್ಚಲಾಗಿದ್ದು, ಎಲ್ಲ ಔಟ್ ಲೆಟ್ ಗಳಲ್ಲಿ ಸಿದ್ಧಾರ್ಥ್ ಅವರ ಸ್ಮರಣಾರ್ಥ ಅವರ ಭಾವ ಚಿತ್ರವಿರಿಸಿ ಪುಷ್ಪ ನಮನ ಸಲ್ಲಿಸಲಾಗಿದೆ.
ಸಿದ್ಧಾರ್ಥ್ ಪಾರ್ಥಿವ ಶರೀರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆ, ಭೂತನಕಾಡು, ಹಾಂದಿ, ಕಬ್ಬಿಣಸೇತುವೆ, ವಸ್ತಾರೆ, ಮೂಗ್ತಿಹಳ್ಳಿ ಸೇರಿದಂತೆ ಮಾರ್ಗದುದ್ದಕ್ಕೂ ಅಂಗಡಿ ಮುಂಗಟ್ಟು ಮುಚ್ಚಿ ಗೌರವ ಸಮರ್ಪಣೆ ಮಾಡಲಾಗುತ್ತಿದೆ.
ಭಾರತದ ಅತಿದೊಡ್ಡ ಕಾಫಿ ಸಂಸ್ಥೆಯ ಮಾಲೀಕ ಮತ್ತು ಸ್ಥಾಪಕ ಕೆಜಿ ಕಾಫಿ ಡೇ (ಸಿಸಿಡಿ) ವಿ.ಜಿ ಸಿದ್ಧಾರ್ಥ್ ಅವರ ಶವವನ್ನು ಬುಧವಾರ ಬೆಳಿಗ್ಗೆ 6: 50ರ ಸುಮಾರಿಗೆ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಪತ್ತೆ ಮಾಡಲಾಗಿದೆ. ಸೋಮವಾರ ಸಂಜೆ ಮಂಗಳೂರು ಸಮೀಪದ ನೇತ್ರಾವತಿ ಸೇತುವೆ ಮೇಲಿಂದ ನಾಪತ್ತೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಕಾಫಿ ಡೇ ಮುಖ್ಯಸ್ಥ ಸಿದ್ಧಾರ್ಥ್ ನದಿಗೆ ಹಾರಿ ಪ್ರಾಣ ಬಿಟ್ಟಿದ್ದರು.