ನವದೆಹಲಿ, ಜು31(Daijiworld News/SS): ಹಿಂದುಯೇತರ ವ್ಯಕ್ತಿ ಆಹಾರ ಡೆಲಿವರಿ ಮಾಡಲು ಬಂದಿದ್ದ ಅಂತ ಗ್ರಾಹಕನೋರ್ವ ಆರ್ಡರ್ ಅನ್ನೇ ಕ್ಯಾನ್ಸಲ್ ಮಾಡಿರುವ ಘಟನೆಯೊಂದು ವರದಿಯಾಗಿದೆ.
ಅಮಿತ್ ಶುಕ್ಲಾ ಎಂಬಾತ ಆರ್ಡರ್ ಅನ್ನೇ ಕ್ಯಾನ್ಸಲ್ ಮಾಡಿರುವ ಗ್ರಾಹಕ. ಆರ್ಡರ್ ಮಾಡಿ, ಬಳಿಕ ಕ್ಯಾನ್ಸಲ್ ಮಾಡಿರುವ ಗ್ರಾಹಕ ಈ ಕುರಿತು ಟ್ವೀಟರ್'ನಲ್ಲಿ, "ನಾನು ಜೋಮ್ಯಾಟೋ ಆರ್ಡರ್ ಕ್ಯಾನ್ಸಲ್ ಮಾಡಿದ್ದೇನೆ. ಕಾರಣ ಹಿಂದೂ ಅಲ್ಲದ ವ್ಯಕ್ತಿಯ ಕೈಯಲ್ಲಿ ನನಗೆ ಆಹಾರ ಕಳುಹಿಸಲಾಗಿತ್ತು. ನಾನು ಡೆಲಿವರಿ ಬಾಯ್ ಅನ್ನು ಬದಲಿಸಲು ಹೇಳಿದ್ದಕ್ಕೆ ಸಂಸ್ಥೆಯವರು ಆಗಲ್ಲ ಎಂದಿದ್ದಾರೆ. ಹೀಗಾಗಿ ಆರ್ಡರ್ ಅನ್ನೇ ಕ್ಯಾನ್ಸಲ್ ಮಾಡಿದೆ ಎಂದು ಬರೆದುಕೊಂಡಿದ್ದರು.
ಆರ್ಡರ್ ಕ್ಯಾನ್ಸಲ್ ಮಾಡಿದ್ದಕ್ಕೆ ಸಂಸ್ಥೆಯವರು ಹಣ ರಿಫಂಡ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿತ್, "ನೀವು ಡೆಲಿವರಿ ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹಾಕುವಂತಿಲ್ಲ ಮತ್ತು ನನಗೆ ನಿಮ್ಮ ರಿಫಂಡ್ ಸಹ ಬೇಕಿಲ್ಲ. ಹಾಗಾಗಿ ಆರ್ಡರ್ ಕ್ಯಾನ್ಸಲ್ ಮಾಡಿ" ಎಂದು ಟ್ವೀಟರ್'ನಲ್ಲಿ ಜೋಮ್ಯಾಟೋಗೆ ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ಜೋಮ್ಯಾಟೋ ಪ್ರತಿಕ್ರಿಯಿಸಿದ್ದು, "ಆಹಾರಕ್ಕೆ ಯಾವುದೇ ಧರ್ಮವಿಲ್ಲ. ಆಹಾರವೇ ಒಂದು ಧರ್ಮ" ಎಂದು ಚಿಕ್ಕದಾಗಿ ಬರೆದು ಗ್ರಾಹಕನಿಗೆ ಖಡಕ್ ತಿರುಗೇಟು ನೀಡಿದೆ.