ಬೆಂಗಳೂರು, ಜು 31 (DaijiworldNews/SM): ಭವಿಷ್ಯದ ಯಾವುದೇ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಜತೆ ಹಾಗೂ ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಇತ್ತೀಚಿಗೆ ನಡೆದಂತಹ ಚುನಾವಣೆಗಳಲ್ಲಿ ಸೋಲುಂಡಂತಹ ಅಭ್ಯರ್ಥಿಗಳ ಸಭೆ ನಡೆಸಿ ಅವರು ಮಾತನಾಡಿದರು. ಸಭೆಯಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇದ್ದ ಪಕ್ಷದ ಸ್ಥಿತಿಗೂ ಸಾರ್ವತ್ರಿಕ ಚುನಾವಣೆ ಬಳಿಕದ ಸ್ಥಿತಿಗೂ ಹಾಗೂ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡ ಬಳಿಕದ ಸ್ಥಿತಿಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಹಾಗೂ ಪಕ್ಷದ ಹೀನಾಯ ಸೋಲಿಗೆ ಕಾರಣಗಳ ಬಗ್ಗೆ ಚರ್ಚಿಸಲಾಯಿತು.
ಮುಂದಿನ ದಿನಗಳಲ್ಲಿ ಪಕ್ಷ ಬಲವರ್ಧನೆಗೆ ಸ್ವತಂತ್ರ ಸ್ಪರ್ಧೆಯೇ ಉತ್ತಮ. ಮೈತ್ರಿಯಿಂದ ಸ್ಥಳೀಯ ಮಟ್ಟದಲ್ಲಿ ಯಾವುದೇ ಲಾಭವಿಲ್ಲ ಎಂಬುವುದಾಗಿ ಮುಖಂಡರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಪಕ್ಷವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯಾವುದೇ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಜೆಡಿಎಸ್ ಬಂದಿದೆ.