ಬೆಂಗಳೂರು, ಜು 31 (DaijiworldNews/SM): ರಾಜ್ಯದಲ್ಲಿ ಆಡಳಿತದಲ್ಲಿದ್ದ ಮೈತ್ರಿ ಸರಕಾರ ಪತನಗೊಂಡ ಬೆನ್ನಲ್ಲೆ ಬಿಜೆಪಿ ಸರಕಾರ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಸದನದಲ್ಲಿ ಬಹುಮತ ಸಾಬೀತು ಪಡಿಸಿದ ಬಳಿಕ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಬಿಜೆಪಿ ಹಿರಿಯ ಶಾಸಕರಾಗಿದ್ದ ವಿಶ್ವೇಶ್ವರ ಕಾಗೇರಿಯವರನ್ನು ಸ್ಪೀಕರ್ ಸ್ಥಾನಕ್ಕೆ ನೇಮಕೆ ಮಾಡಿಕೊಂಡಿದೆ. ಅವಿರೋಧವಾಗಿ ಆಯ್ಕೆಯಾದ ಸ್ಪೀಕರ್ ಅವರಿಗೆ ಮೂರೂ ಪಕ್ಷದ ಮುಖಂಡರು ಸದನದಲ್ಲಿ ಅಭಿನಂದನೆ ಸಲ್ಲಿಸಿದರು.
ನೂತನ ಸ್ಪೀಕರ್ ಅವರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೂ ಕೂಡ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೊಸ ಸ್ಪೀಕರ್ ಅವರಿಗೆ ಸದನದ ಪ್ರಾಮುಖ್ಯತೆ, ಸ್ಪೀಕರ್ ಸ್ಥಾನದ ಘನತೆ, ಅದರ ಇತಿಹಾಸ ಎಲ್ಲವನ್ನೂ ತಿಳಿಸಿ, ಅವರಿಗೆ ಪ್ರಮುಖ ಸಲಹೆಗಳನ್ನೂ ರಮೇಶ್ ಕುಮಾರ್ ಅವರು ನೀಡಿದರು. ಲೋಕಸಭೆಯ ಇತಿಹಾಸ, ಲೋಕಸಭೆಯಲ್ಲಿ ಸ್ಪೀಕರ್ ಆಗಿದ್ದ ಪ್ರಮುಖ ವ್ಯಕ್ತಿಗಳ ಬಗ್ಗೆ ಮೊದಲಿಗೆ ಮಾಹಿತಿ ನೀಡಿದರು.
ಮನುಸ್ಮೃತಿಯಲ್ಲಿ 1034 ಶ್ಲೋಕಗಳ ಮೂಲಕ ಬ್ರಾಹ್ಮಣ್ಯದ ಬಗ್ಗೆ ಹೇಳಲಾಗಿದೆ, 900 ಕ್ಕೂ ಹೆಚ್ಚು ಶ್ಲೋಕಗಳ ಮೂಲಕ ಕ್ಷತ್ರೀಯನ ಬಗ್ಗೆ ಮಾತುಗಳಿವೆ, ವೈಶ್ಯನ ಬಗ್ಗೆ ಕೆಲವು ಶ್ಲೋಕಗಳಿವೆ ಶೂದ್ರನ ಬಗ್ಗೆ ಶ್ಲೋಕಗಳೇ ಇಲ್ಲ. ಶೂದ್ರರೇ ಹೆಚ್ಚಿರುವ ದೇಶದಲ್ಲಿ ಆ ಸಮುದಾಯದ ಬಗ್ಗೆ ಉಲ್ಲೇಖವೇ ಇಲ್ಲದ ಮನುಸ್ಮೃತಿಯ ಆಧಾರದಲ್ಲಿ ದೇಶ ನಡೆಸುವ ಹುನ್ನಾರ ನಡೆದಿತ್ತು ಎಂದು ರಮೇಶ್ ಕುಮಾರ್ ಅವರು ಇತಿಹಾಸವನ್ನು ನೆನಪಿಸಿದರು.
ಸ್ಪೀಕರ್ ಕಾಗೇರಿ ಅವರನ್ನು ಉದ್ಧೇಶಿಸಿ ಮಾತನಾಡಿದ ರಮೇಶ್ ಕುಮಾರ್ ಅವರು, 'ನಿಮ್ಮ ವೈಚಾರಿಕ ಹಿನ್ನಲೆ ಚಾತುವರ್ಣವನ್ನು ಸಮರ್ಥಿಸುವಂತಿದೆ, ಮನುಸ್ಮೃತಿಯನ್ನು ಸಮರ್ತಿಸಿರುವ ಸಂಘದ ಹಿನ್ನೆಲೆಯೂ ನಿಮಗೆ ಇದೆ, ಆದರೆ ನೀವು ಕೂತಿರುವ ಪೀಠದ ಮೇಲೆ ತಕ್ಕಡಿ ಇದೆ, ಇಲ್ಲಿ ಸಮಾನತೆಯೊಂದೇ ನಿಮ್ಮ ಗುರಿ ಆಗಿರಬೇಕು. ಸಂವಿಧಾನವೇ ನಿಮಗೆ ಎಲ್ಲವೂ ಆಗಬೇಕಿದೆ. ಹಾಗಾಗಿ ಮನುಸ್ಮೃತಿಯ ವೈಚಾರಿಕತೆಯಿಂದ ಹೊರಗೆ ಬಂದು, ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಂವಿಧಾನಕ್ಕೆ ಮಾತ್ರವೇ ನಿಷ್ಠೆ ತೋರಿ ಎಂದು ರಮೇಶ್ ಕುಮಾರ್ ಸಲಹೆ ನೀಡಿದರು.